ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಜಿಲ್ಲಾದ್ಯಂತ ಸುಮಾರು ೧೫ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಸಸ್ಯಕ್ರಾಂತಿಗೆ ಕಾರಣರಾದ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಸಾಲುಮರದ ಸಿ.ಎಂ. ವೆಂಕಟೇಶ್ ಪರಿಸರ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬಣ್ಣಿಸಿದರು.ಭಾನುವಾರ ಸಿ.ಎಂ. ವೆಂಕಟೇಶ್ ನೇತೃತ್ವದ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮಿಗಳವರ ಹುಟ್ಟುಹಬ್ಬದ ನಿಮಿತ್ತ ತಾಲೂಕಿನ ಯರಿಯೂರು ಗ್ರಾಮವನ್ನು ಹಸಿರು ಗ್ರಾಮವಾಗಿಸುವ ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿ ೯೪೮ರ ರಸ್ತೆಯ ಎರಡು ಬದಿಯಲ್ಲಿ ೨೫೦ ಸಾಲು ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಚಾಮರಾಜನಗರ ಜಿಲ್ಲೆಯನ್ನು ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಪರಿಸರ ಪ್ರೇಮಿ ಸಿ.ಎಂ. ವೆಂಕಟೇಶ್ ತೊಡಗಿದ್ದಾರೆ. ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿದ್ದರೂ ಸಹ ಪ್ರವೃತ್ತಿಯಲ್ಲಿ ಪರಿಸರ ಪ್ರೇಮಿಯಾಗಿದ್ದಾರೆ. ಇದುವರೆಗೂ ಜಿಲ್ಲಾಧ್ಯಂತ ಹಸಿರು ಕ್ರಾಂತಿ ಸೃಷ್ಟಿಸಿರುವ ಇವರು ೧೫ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುವುದು ಮಾತ್ರವಲ್ಲದೇ, ಅವುಗಳ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಈ ಪರಿಸರ ಸೇವೆಯನ್ನು ಪರಿಗಣಿಸಿ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕಾರಗಳು ದೊರೆಯುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಅಪ್ರತಿಮ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕರವರಂತೆ ಜಿಲ್ಲೆಯವರೇ ಆದ ಸಿಎಂ ವೆಂಕಟೇಶ್‌ರವರ ಪರಿಸರ ಸಂರಕ್ಷಣೆಯ ಸೇವೆ ಅಪ್ರತಿಮವಾದದು ಎಂದು ಬಣ್ಣಿಸಿದರು.ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಸಿ. ಎಂ. ವೆಂಕಟೇಶ್ ಮಾತನಾಡಿ, ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಹುಟ್ಟುಹಬ್ಬದ ನಿಮಿತ್ತ ತಾಲೂಕಿನ ಯರಿಯೂರು ಗ್ರಾಮವನ್ನು ಹಸಿರು ಗ್ರಾಮವಾಗಿಸಲು ರಾಷ್ಟ್ರೀಯ ಹೆದ್ದಾರಿ ೯೪೮ರ ರಸ್ತೆಯ ಎರಡು ಬದಿಯಲ್ಲಿ ೨೫೦ ಸಾಲು ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಇದಲ್ಲದೇ ಜಿಲ್ಲಾಧ್ಯಂತ ಪ್ರಸಿದ್ದ ಸಾಧಕರ ಹೆಸರಿನಲ್ಲಿ ಅವರ ನೆನಪಿನಾರ್ಥಕ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕೇವಲ ಗಿಡ ನೆಡುವುದು ಮಾತ್ರವಲ್ಲದೇ ಅವುಗಳಿಗೆ ಸೂಕ್ತ ಪಾಲನೆ ಪೋಷಣೆಯನ್ನು ನೀಡಿ, ಎಲ್ಲಾ ಸವಾಲುಗಳಿಂದ ಅವುಗಳನ್ನು ರಕ್ಷಿಸಿಕೊಂಡು ಬರಲಾಗುತ್ತದೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದೆ ಎಂದರು.ಕಾರಾಪುರ ವಿರಕ್ತ ಮಠದ ಶ್ರೀ ಬಸರಾಜಸ್ವಾಮಿ ಒಡೆಯರ್ ಮಾತನಾಡಿ, ವೆಂಕಟೇಶ್ ಪರಿಸರ ಸಂರಕ್ಷಣೆಗಾಗಿಯೇ ಕುಟುಂಬದ ಸಮೇತ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ. ದುಡಿಮೆಯ ಬಹುಪಾಲನ್ನು ಈ ಮರ ಗಿಡಗಳ ಪಾಲನೆ ಪೋಷಣೆಗಾಗಿಯೇ ಮೀಸಲಿರಿಸಿರುವ ಇವರು ಜಿಲ್ಲೆಯಲ್ಲಿ ಹಸಿರೀಕರಣವಾಗಲು ಬಹುದೊಡ್ಡ ಪಾತ್ರವಹಿಸಿದ್ದಾರೆ. ವಿಶ್ವದಾದ್ಯಂತ ಇಂದು ಮಾಲಿನ್ಯಗಳಿಂದಾಗಿ ಅನೇಕ ಬಗೆಯ ತೊಂದರೆಗಳು ಉಂಟಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಗಿಡಮರಗಳ ಸಂರಕ್ಷಣೆಯಿಂದಾಗಿ ವಾತಾವರಣದಲ್ಲಿರುವ ಇಂಗಾಲವನ್ನು ಹೀರಿಕೊಂಡು ನಮಗೆ ಉಸಿರಾಡಲು ಬೇಕಾದ ಯೋಗ್ಯ ಆಮ್ಲಜನಕ ದೊರೆಯಲು ಸಹಕಾರಿಯಾಗಿದೆ. ಇದರಿಂದ ಎಲ್ಲರೂ ಉತ್ತಮ ಆರೋಗ್ಯ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಶ್ರೀಧರ್, ಗ್ರಾಮಸ್ಥರಾದ ಡಾ.ಶ್ರೀಕಂಠಮೂರ್ತಿ ಪಿಡಿಒ ಶಿವಕುಮಾರ್, ಜಯಣ್ಣ, ಪ್ರಕಾಶ್ ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))