ಎಲ್ಲಾ ಜೀವಿಗಳ ಆವಾಸಸ್ಥಾನ ರಕ್ಷಿಸುವುದು ನಮ್ಮ ಹೊಣೆ: ನಂದೀಶ್

| Published : Oct 09 2024, 01:30 AM IST

ಸಾರಾಂಶ

ಕೊಪ್ಪ, ಪ್ರತೀ ವರ್ಷ ಅಕ್ಟೋಬರ್ ತಿಂಗಳ ಮೊದಲ ಸೋಮವಾರವನ್ನು ವಿಶ್ವ ಆವಾಸಸ್ಥಾನ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿದೆ. ಮನುಷ್ಯನ ವಾಸ ಪ್ರದೇಶವಾದ ನಗರ, ಪಟ್ಟಣ, ಹಳ್ಳಿಗಳ ಅಭಿವೃದ್ಧಿಯೊಂದಿಗೆ ವೈವಿಧ್ಯವಾದ ಸಸ್ಯ ಹಾಗೂ ಜೀವ ವೈವಿಧ್ಯತೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ಬಗೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ೧೯೮೫ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ ಹೇಳಿದರು.

ಕೊಪ್ಪ ಅರಣ್ಯ ವಿಭಾಗದಿಂದ ಅರಣ್ಯ ಭವನದಲ್ಲಿ ನಡೆದ ವಿಶ್ವ ಆವಾಸಸ್ಥಾನ ದಿನಾಚರಣೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಪ್ರತೀ ವರ್ಷ ಅಕ್ಟೋಬರ್ ತಿಂಗಳ ಮೊದಲ ಸೋಮವಾರವನ್ನು ವಿಶ್ವ ಆವಾಸಸ್ಥಾನ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿದೆ. ಮನುಷ್ಯನ ವಾಸ ಪ್ರದೇಶವಾದ ನಗರ, ಪಟ್ಟಣ, ಹಳ್ಳಿಗಳ ಅಭಿವೃದ್ಧಿಯೊಂದಿಗೆ ವೈವಿಧ್ಯವಾದ ಸಸ್ಯ ಹಾಗೂ ಜೀವ ವೈವಿಧ್ಯತೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ಬಗೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ೧೯೮೫ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ ಹೇಳಿದರು. ಕೊಪ್ಪ ಅರಣ್ಯ ವಿಭಾಗದಿಂದ ಸೋಮವಾರ ಅರಣ್ಯ ಭವನದಲ್ಲಿ ನಡೆದ ವಿಶ್ವ ಆವಾಸಸ್ಥಾನ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೂರ್ವ ಆಫ್ರಿಕಾದ ಮಡಗಾಸ್ಕರ್ ದ್ವೀಪದಲ್ಲಿದ್ದ ಒಂದು ಜಾತಿ ಸಸ್ಯಗಳ ಹಣ್ಣನ್ನು ತಿನ್ನುತ್ತಿದ್ದ ಡೊಡೊ ಎಂಬ ಪಕ್ಷಿಯ ಹಿಕ್ಕೆಯಿಂದ ಮಾತ್ರ ಆ ಸಸ್ಯದ ಪುನರ್ ಉತ್ಪತ್ತಿಯಾಗುತ್ತಿತ್ತು. ಈ ಡೊಡೊ ಪಕ್ಷಿಯನ್ನು ಭೇಟೆಯಾಡಿ ಅವುಗಳ ಸಂತತಿ ನಾಶ ಮಾಡಿದ್ದರಿಂದ ಪ್ರಸ್ತುತ ಈ ಡೊಡೊ ಪಕ್ಷಿಯ ಸಂತತಿಯೊಂದಿಗೆ ಆ ಅಪರೂಪದ ಸಸ್ಯ ಪ್ರಬೇಧ ನಾಶವಾಗಿದೆ. ಇಂತಹ ಅನೇಕ ಜೀವ ಪ್ರಬೇಧಗಳು ಮನುಷ್ಯರ ಅತಿಕ್ರಮಣದಿಂದ ವಿನಾಶದ ಅಂಚಿನಲ್ಲಿವೆ. ಎಲ್ಲಾ ಜೀವಿಗಳ ಆವಾಸಸ್ಥಾನ ರಕ್ಷಿಸಿದ್ದಲ್ಲಿ ಮನುಷ್ಯನು ಸೇರಿದಂತೆ ವಿಶ್ವ ಜೀವವೈವಿಧ್ಯದ ಸುರಕ್ಷಿತ ಆವಾಸ ಸ್ಥಾನವಾಗಬಲ್ಲದು ಎಂದರು.ಮುಖ್ಯ ಉಪನ್ಯಾಸಕ ಶೃಂಗೇರಿ ಜೆ.ಸಿಬಿ.ಎಂ. ಕಾಲೇಜು ಉಪನ್ಯಾಸಕ ರಾಘವೇಂದ್ರ ಎಂ.ಪಿ. ಮಾತನಾಡಿ ನಾಗರಿಕತೆ ನೆಪದಲ್ಲಿ ಮನುಷ್ಯನ ಚಟುವಟಿಕೆಗಳು ಭೂಮಿ ಉಷ್ಣತೆಯನ್ನು ಹೆಚ್ಚು ಮಾಡುತ್ತಿವೆ. ೨೦೨೩ನೇ ಇಸವಿ ಭೂಮಿಯ ಜನನದಿಂದ ಇಲ್ಲಿಯವರೆಗಿನ ಗರಿಷ್ಠ ಉಷ್ಣಾಂಶ ದಾಖಲಾದ ವರ್ಷವಾಗಿದೆ. ಇದೇ ರೀತಿ ಭೂಮಿ ತಾಪಮಾನ ವೃದ್ಧಿಸಿದ್ದಲ್ಲಿ ಮುಂದಿನ ಸುಮಾರು ೧೫೦ ವರ್ಷಗಳಲ್ಲಿ ಭೂಮಿಯ ಮೇಲಿನ ಜೀವ ವೈವಿಧ್ಯ ಸಂಪೂರ್ಣವಾಗಿ ನಾಶವಾಗಬಲ್ಲದು. ಬ್ರಹ್ಮಾಂಡದಲ್ಲಿ ಭೂಮಿಯೊಂದೇ ಸಕಲಜೀವಿಗಳಿಗೆ ವಾಸ ಯೋಗ್ಯವಾದ ಆವಾಸಸ್ಥಾನ. ಅದುದರಿಂದ, ಈ ಭೂಮಿ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.ಕೊಪ್ಪ ಪ್ರಶಮನಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಉದಯ್ ಶಂಕರ್ ಮಾತನಾಡಿ ಅರಣ್ಯ ಸಂಪನ್ಮೂಲ ಸಂರಕ್ಷಿಸುವ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಸಿರು ಸೇನಾನಿಗಳು ಎಂಬ ಮೆಚ್ಚುಗೆ ವ್ಯಕ್ತ ಪಡಿಸಿದರು. ಮನುಷ್ಯ ಪ್ರಕೃತಿಯ ಇತರೆ ಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆಯಾಗದಂತೆ ಪ್ರಕೃತಿಯೊಂದಿಗೆ ಒಂದಾಗಿ ಬದುಕುವುದನ್ನು ಅನುಸರಿಸಬೇಕು ಎಂದರು.ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಎಂ.ಶ್ರೀಹರ್ಷ ಮಾತನಾಡಿ ಪ್ರಕೃತಿಯಲ್ಲಿ ಕೆಲವು ಪ್ರಬೇಧಗಳ ಅಳಿವಿನಿಂದ ಪ್ರಕೃತಿ ಅಸಮತೋಲನಕ್ಕೆ ಒಳಗಾಗಿದೆ ಎಂದರು.ನ.ರಾ.ಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್.ಎನ್. ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಪ್ಪ ವಲಯ ಅರಣ್ಯಾಧಿಕಾರಿ ಜಿ.ಟಿ.ರಂಗನಾಥ್, ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ.ಎಂ.ಪಿ. ಗ್ರಾಮ ಅರಣ್ಯ ಸಮಿತಿಗಳ ಹಾಗೂ ವಿವಿಧ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಇಲಾಖಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.