ರಕ್ತದಲ್ಲಿನ ಸಕ್ಕರೆ, ಹಿಮೋಗ್ಲೋಬಿನ್ ಮತ್ತು ರಕ್ತದೊತ್ತಡದ ಪರೀಕ್ಷೆಗಳು ನಡೆದವು. ಔಷಧಗಳು ಹಾಗೂ ಪೌಷ್ಟಿಕಾಂಶ ಪೂರಕಗಳನ್ನು ಉಚಿತವಾಗಿ ವಿತರಿಸಲಾಯಿತು. 500ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ರೈತರು ಹಾಗೂ ಜನಸಾಮಾನ್ಯರ ಹಿತರಕ್ಷಣೆ ಮಾಡುವುದು ಸಮಾಜದ ಪ್ರತಿಯೊಂದು ಸಂಸ್ಥೆಯ ಕರ್ತವ್ಯವಾಗಬೇಕು ಎಂದು ಆದಿಚುಂಚನಗಿರಿ ಮಂಡ್ಯ ಶಾಖಾ ಮಠದ ಸತ್ಕೀರ್ತಿನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ದೇವಲಾಪುರದಲ್ಲಿ ಹಂಪಾಪುರ ಪವರ್ ಟ್ರಾನ್ಸ್‌ಮಿಷನ್ ಲಿಮಿಟೆಡ್ ಸಂಸ್ಥೆಯು ಇತ್ತೀಚೆಗೆ ಆಯೋಜಿಸಿದ್ದ ರೈತರಿಗೆ ಪರಿಹಾರ ವಿತರಣೆ ಹಾಗೂ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯುತ್ ಮೂಲಸೌಕರ್ಯ ಯೋಜನೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ತಕ್ಷಣವೇ ಪರಿಹಾರ ಒದಗಿಸಿರುವುದು ಹಾಗೂ ಗ್ರಾಮೀಣ ಜನತೆಗೆ ಉತ್ತಮ ವೈದ್ಯಕೀಯ ಸೇವೆ ತಲುಪಿಸಲು ಸಂಜೀವಿನಿ ಉಪಕ್ರಮದಡಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿರುವ ಹಂಪಾಪುರ ಪವರ್ ಟ್ರಾನ್ಸ್‌ಮಿಷನ್ ಸಂಸ್ಥೆಯ ಜನಪರ ಕಾಳಜಿ ಅತ್ಯಂತ ಶ್ಲಾಘನೀಯ ಎಂದರು.

ಗ್ರಾಮೀಣ ಪ್ರದೇಶದ 500ಕ್ಕೂ ಹೆಚ್ಚು ಜನರಿಗೆ ವೈದ್ಯಕೀಯ ಸೇವೆ ತಲುಪಿಸಲು, ಹಂಪಾಪುರ ಪವರ್ ಟ್ರಾನ್ಸ್‌ಮಿಷನ್ ಲಿಮಿಟೆಡ್, ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ವಿಭಿನ್ನ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಸಂಜೀವಿನಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿತ್ತು.

ತಾಲೂಕಿನ ದೇವಲಾಪುರ, ಭೀಮನಹಳ್ಳಿ ಮತ್ತು ಬಿಳಿಗುಂದ ಗ್ರಾಮಗಳಲ್ಲಿ ಅನುಕ್ರಮವಾಗಿ ಮೂರು ದಿನಗಳ ಕಾಲ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ, ನೇತ್ರ, ಮೆಡಿಸಿನ್ ಹಾಗೂ ಮಕ್ಕಳ ವಿಭಾಗದ ತಜ್ಞರಿಂದ ತಪಾಸಣೆ ನಡೆಯಿತು.

ರಕ್ತದಲ್ಲಿನ ಸಕ್ಕರೆ, ಹಿಮೋಗ್ಲೋಬಿನ್ ಮತ್ತು ರಕ್ತದೊತ್ತಡದ ಪರೀಕ್ಷೆಗಳು ನಡೆದವು. ಔಷಧಗಳು ಹಾಗೂ ಪೌಷ್ಟಿಕಾಂಶ ಪೂರಕಗಳನ್ನು ಉಚಿತವಾಗಿ ವಿತರಿಸಲಾಯಿತು. 500ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು.

ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಗ್ರಾಮೀಣ ಪ್ರದೇಶದ ಜನರಿಗೆ ಈ ಶಿಬಿರವು ಸಹಕಾರಿಯಾಗಿದ್ದು, ಮುಂದೆಯೂ ಇಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಸಂಸ್ಥೆ ಮುಖ್ಯಸ್ಥರು ಭರವಸೆ ನೀಡಿದರು.

ತಾಲೂಕಿನ ದೇವಲಾಪುರ ಹೋಬಳಿಯ ಮಲ್ಲಸಂದ್ರ ಗ್ರಾಮದ ರೈತ ಶೇಖರ್ ಅವರ ಜಮೀನಿನಲ್ಲಿ ವಿದ್ಯುತ್ ಪ್ರಸರಣ ಗೋಪುರ ಅಳವಡಿಸುವಾಗ ರಾಗಿ ಮತ್ತು ಜೋಳದ ಬೆಳೆಗಳಿಗೆ ಹಾನಿಯಾಗಿತ್ತು. ಈ ನಷ್ಟಕ್ಕೆ ಸ್ಪಂದಿಸಿದ ಎಚ್‌ಪಿಟಿಎಲ್ ಸಂಸ್ಥೆಯು ತಹಸೀಲ್ದಾರ್ ಡಾ.ಎಸ್.ಯು. ಅಶೋಕ್ ಅವರಿಂದ ರೈತ ಶೇಖರ್‌ಗೆ ಪರಿಹಾರದ ಚೆಕ್ ವಿತರಿಸಿತು.

ರಾಜ್ಯದ ವಿದ್ಯುತ್ ಬೇಡಿಕೆ ಪೂರೈಸಲು ಯೋಜನೆಗಳು ಅಗತ್ಯವಾಗಿದ್ದು, ಇದರಿಂದ ಬಾಧಿತರಾಗುವ ರೈತರಿಗೆ ಸ್ಪಂದಿಸುವುದು ಸಂಸ್ಥೆಯ ಮುಖ್ಯ ಉದ್ದೇಶ ಎಂದು ಎಚ್‌ಪಿಟಿಎಲ್ ಸಂಸ್ಥೆ ತಿಳಿಸಿದೆ.

ಈ ವೇಳೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಜಿ.ವಾಸುದೇವ, ರೆಸೋನಿಯಾ ಸಂಸ್ಥೆ ಪ್ರತಿನಿಧಿಗಳಾದ ರಾಜೇಶ್, ತರುಣ್ ಕುಮಾರ್, ಸಮರ್ಥ್ ಹಾಗೂ ಪರ್ವೀಜ್ ಸೇರಿದಂತೆ ಹಲವರು ಇದ್ದರು.