ಶ್ರೀಲಂಕಾ ದೀವಾಳಿಯಾದಾಗ ಅವರಿಗೆ ನಾವು ಆಹಾರಧಾನ್ಯ, ನೆರವು ಕೊಟ್ಟು ಕಾಪಾಡಿದ್ದೇವೆ, ಅಪಘಾನಿಸ್ತಾನ ಸಂಕಷ್ಟದಲ್ಲಿದ್ದಾಗ ನಾವು ಆಹಾರಧಾನ್ಯ ನೀಡಿದ್ದೇವೆ

ಕೊಪ್ಪಳ: ರಷ್ಯಾ, ಉಕ್ರೇನ್ ನಡುವೆ ಯುದ್ಧ ನಡೆದಾಗ ಅಲ್ಲಿಯ ನಮ್ಮ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲು ಭಾರತ ಯುದ್ಧವನ್ನೇ ನಿಲ್ಲಿಸಿತು. ಆಗ ಭಾರತದ ಧ್ವಜ ಹಿಡಿದು ಪಾಕಿಸ್ತಾನ ವಿದ್ಯಾರ್ಥಿಗಳು ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡಿದ್ದರು. ಇದು ಭಾರತದ ಶಕ್ತಿ ಎಂದು ಹಿಂದೂ ಮುಖಂಡ ಮನೋಹರ ಮಠದ ಹೇಳಿದ್ದಾರೆ.

ಕೊಪ್ಪಳ ಸಮೀಪದ ಭಾಗ್ಯನಗರದ ಸಾರ್ವಜನಿಕ ಮೈದಾನದಲ್ಲಿ ಹಮ್ಮಿಕೊಂಡಿದ್ದ ಶೋಭಾ ಯಾತ್ರೆ ಮತ್ತು ಹಿಂದೂ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಈಗ ಹಿಂದಿನಂತೆ ಇಲ್ಲ. ಭಾರತಕ್ಕೆ ಜಗತ್ತೇ ಗೌರವ ನೀಡುವ ತಾಕತ್ತು ಬಂದಿದೆ. ರಷ್ಯಾ, ಉಕ್ರೇನ್ ಯುದ್ಧದ ಸಮಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕೆಲಕಾಲ ಯುದ್ಧ ನಿಲ್ಲಿಸಿ, ನಮ್ಮ ವಿದ್ಯಾರ್ಥಿಗಳನ್ನು ಕರೆತರಬೇಕು ಎಂದಾಗ ಯುದ್ಧ ನಿಲ್ಲಿಸಿದರು. ನಮ್ಮ ಈ ಸಮಯ ಪಾಕಿಸ್ತಾನ ವಿದ್ಯಾರ್ಥಿಗಳು ಭಾರತದ ಧ್ವಜ ಹಿಡಿದು ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡಿದ್ದು ಸಾಮಾನ್ಯ ಸಂಗತಿಯೇನು ಅಲ್ಲ ಎಂದರು.

ಶ್ರೀಲಂಕಾ ದೀವಾಳಿಯಾದಾಗ ಅವರಿಗೆ ನಾವು ಆಹಾರಧಾನ್ಯ, ನೆರವು ಕೊಟ್ಟು ಕಾಪಾಡಿದ್ದೇವೆ, ಅಪಘಾನಿಸ್ತಾನ ಸಂಕಷ್ಟದಲ್ಲಿದ್ದಾಗ ನಾವು ಆಹಾರಧಾನ್ಯ ನೀಡಿದ್ದೇವೆ. ಹೀಗೆ ಜಗತ್ತಿನ ಯಾವ ದೇಶಗಳು ಸಂಕಷ್ಟದಲ್ಲಿದ್ದರೂ ಸಹ ಅವರಿಗೆ ನೆರವು ನೀಡಿದ್ದೇವೆ. ಜಾತಿ, ಮತ, ಪಂಥ ಹಾಗೂ ಧರ್ಮ ನೋಡದೆ ಸಹಾಯ ಮಾಡಿದ್ದೇವೆ. ಇದಕ್ಕಾಗಿ ಇಡೀ ಜಗತ್ತು ಭಾರತ ಗೌರವಿಸುತ್ತಿದೆ. ಇದು ಇಂದಿನ ಭಾರತದ ತಾಕತ್ತು ಎಂದು ಹೇಳಿದರು.

ಆದರೆ, ದುರಂತ ಎಂದರೇ ನಮ್ಮಲ್ಲಿಯೇ ನಾವು ಇಂದು ಸಮಸ್ಯೆ ಎದುರಿಸುತ್ತಿದ್ದೇವೆ. ಹಿಂದೂ ಧರ್ಮ ಸಂಘಟಿಸುವ ದಿಸೆಯಲ್ಲಿ ನಾವು ಇನ್ನು ಗಟ್ಟಿಯಾಗಬೇಕಾಗಿದೆ. ಆದರೆ, ನಮ್ಮ ನಮ್ಮಲ್ಲಿಯ ಜಾತಿಗಳಿಂದಾಗಿ ನಾವು ಒಡೆದುಹೋಗುತ್ತಿದ್ದೇವೆ. ಅವೆಲ್ಲವನ್ನು ಬದಿಗೊತ್ತಿ, ಹಿಂದು ಎಲ್ಲ ಒಂದು ಎನ್ನುವ ಭಾವನೆ ಬರಬೇಕಾಗಿದೆ ಎಂದರು.

ಹಿಂದೂ ಧರ್ಮ ಮುಸ್ಲಿಂ, ಕ್ರಿಶ್ಚಿಯನ್ ವಿರುದ್ಧ ಎಂದು ಹೇಳಲಾಗುತ್ತದೆ. ಆದರೆ, ಅಂಥ ಯಾವ ಕೆಲಸ ಹಿಂದೂಗಳು ಮಾಡುವುದಿಲ್ಲ.

ಹಿಂದೂ ಎಂದರೇ ಉತ್ತರದಿಂದ ಹಿಮಾಲಯದಲ್ಲಿ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೂ ವಾಸಿಸುವ ಪ್ರತಿಯೊಬ್ಬರು ಹಿಂದೂಗಳು. ಹಿಂಸೆ ಮಾಡದೆ ಇರುವವರನ್ನು ಹಿಂದೂ ಎಂದು ಹೇಳುತ್ತಾರೆ. ಇದನ್ನು ನಾನು ಹೇಳುತ್ತಿಲ್ಲ,ಇತಿಹಾಸ ತೆಗೆದು ನೋಡಿ, ದುಷ್ಟ ಶಕ್ತಿಗಳು ದಾಳಿ ಮಾಡಿದಾಗಲೂ ನಾವು ಕುಗ್ಗಲಿಲ್ಲ. ಹಿಂದೂಗಳು ಯಾರ ಮೇಲೆಯೂ ದಂಡೆತ್ತಿ ಹೋಗಿಲ್ಲ, ಯಾವ ಧರ್ಮದ ಮೇಲೆಯೂ ದಾಳಿ ಮಾಡಿಲ್ಲ. ಅದು ತಾನಾಗಿಯೇ ಇರುವುದೇ ಹಿಂದೂ. ವಿಶ್ವವೇ ಒಂದು ಕುಟುಂಬ ಎಂದು ಕರೆಯುವವರು ಹಿಂದೂಗಳು ಮಾತ್ರ ಎಂದು ಹೇಳಿದರು.

ಶೋಭಾ ಯಾತ್ರೆಗೆ ಚಾಲನೆ: ಶ್ರೀಶಂಕರಚಾರ್ಯ ಮಠದಿಂದ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ, ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಡಾ. ಬಸವರಾಜ ಕ್ಯಾವಟರ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್, ಆರ್.ಬಿ. ಪಾನಘಂಟಿ, ಗಿರೀಶ ಪಾನಘಂಟಿ ಸೇರಿದಂತೆ ಇತರರು ಇದ್ದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಶಂಕರಚಾರ್ಯ ಮಠದ ಶ್ರೀಶಿವಪ್ರಕಾಶ ಸ್ವಾಮೀಜಿ ವಹಿಸಿದ್ದರು.

ಡಾ. ಕೊಟ್ರೇಶ ಶೆಡ್ಮಿ, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಪಾನಘಂಟಿ ಫೌಂಡೇಶನ್ ಕಾರ್ಯದರ್ಶಿ ಶಾರದಾ ಪಾನಘಂಟಿ ಸೇರಿದಂತೆ ಅನೇಕರು ಇದ್ದರು.