ಕಲಬುರಗಿಯಲ್ಲಿ ಸೆ. 27 ರಂದು ಹಮ್ಮಿಕೊಂಡಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿ ಬಸವಣ್ಣನವರ ತತ್ವಗಳು ಹಾಗೂ ಸಂವಿಧಾನ ಮೌಲ್ಯಗಳ ರಕ್ಷಣೆಗಾಗಿ ಸೆ.25 ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಸುರಪುರ
ಕಲಬುರಗಿಯಲ್ಲಿ ಸೆ. 27 ರಂದು ಹಮ್ಮಿಕೊಂಡಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿ ಬಸವಣ್ಣನವರ ತತ್ವಗಳು ಹಾಗೂ ಸಂವಿಧಾನ ಮೌಲ್ಯಗಳ ರಕ್ಷಣೆಗಾಗಿ ಸೆ.25 ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದರು.ನಗರದ ತಾಲೂಕು ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಮಠಾಧೀಶ ಕನ್ನೇರಿ ಸ್ವಾಮೀಜಿಯವರ ಕೆಲವು ಚಟುವಟಿಕೆಗಳು ಬಸವಣ್ಣನವರ ಮೂಲ ಆಶಯಗಳಿಗೆ ವಿರುದ್ಧವಾಗಿವೆ. ಹಿಂದೂ ಶರಣ ಸೇರಿದಂತೆ ಇಂತಹ ಸಮಾವೇಶಗಳ ಮೂಲಕ ಬಸವ ತತ್ವಗಳ ಮೂಲ ಆಶಯ ಬದಲಿಸುವ ಪ್ರಯತ್ನ ನಡೆಯುತ್ತಿದೆ ಎಂಬುದು ಸಂಘಟನೆಗಳ ಅಭಿಪ್ರಾಯವಾಗಿದೆ ಎಂದರು.
ಬುದ್ಧ, ಮಹಾವೀರ, ಗುರುನಾನಕ್ ಹಾಗೂ ಬಸವಣ್ಣನವರು ಶೋಷಣೆ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದ ದಾರ್ಶನಿಕರು. ಶರಣರ ಚಿಂತನೆಗಳಲ್ಲಿ ಮೇಲು ಕೀಳು, ಜಾತಿ ಹಾಗೂ ಲಿಂಗಭೇದಕ್ಕೆ ಅವಕಾಶವಿಲ್ಲ.ಆದ್ದರಿಂದ ಬಸವಣ್ಣನವರ ವಿಚಾರಗಳನ್ನು ಯಾವುದೇ ಒಂದು ಧಾರ್ಮಿಕ ಅಥವಾ ರಾಜಕೀಯ ಚೌಕಟ್ಟಿನಲ್ಲಿ ಸೀಮಿತಗೊಳಿಸಬಾರದು ಎಂದು ತಿಳಿಸಿದರು.ಸೆ.25ರಂದು ಕನ್ನೇರಿ ಸ್ವಾಮೀಜಿ ಅವರು ಕಲಬುರಗಿಗೆ ಆಗಮಿಸಲಿರುವ ಹಿನ್ನಲೆಯಲ್ಲಿ ವಿವಿಧ ಪ್ರಗತಿಪರ ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ತಿಮ್ಮಾಪುರ ವೃತ್ತದಿಂದ ಜಗತ್ ವೃತ್ತದ ಮೂಲಕ ಅಂಬೇಡ್ಕರ್ ಪ್ರತಿಮೆಯವರೆಗೆ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ. ಲಿಂಗಾಯತ ಮಠಾಧೀಶ ಕನ್ನೇರಿ ಸ್ವಾಮಿಯನ್ನು ತಡೆಯಲು ಕಲಬುರಗಿ ನಗರದ ಪ್ರಮುಖ ಪ್ರವೇಶ ಮಾರ್ಗಗಳಲ್ಲಿ ರಸ್ತೆ ತಡೆ ನಡೆಸುವ ಕುರಿತು ಸಂಘಟನೆಗಳು ನಿರ್ಧರಿಸಿವೆ ಎಂದು ಹೇಳಿದರು.
ಜಿಲ್ಲಾ ಮುಖಂಡ ಮಾನು ಗುರಿಕಾರ ಮಾತನಾಡಿ, ಬಸವಣ್ಣನವರ ಮಾನವೀಯ ಚಿಂತನೆಗಳನ್ನು ಉಳಿಸಬೇಕಾಗಿದೆ. ಲಿಂಗಾಯತರು, ದಲಿತರು ಸೇರಿದಂತೆ ಎಲ್ಲ ಪ್ರಜ್ಞಾವಂತರು ಬಸವಣ್ಣನವರ ಮಾನವೀಯ ಆಶಯಗಳು ಹಾಗೂ ಭಾರತೀಯ ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ಒಗ್ಗೂಡಬೇಕು. ಕನ್ನೇರಿ ಮಠದ ಚಟುವಟಿಕೆಗಳ ಹಿಂದೆ ಆರ್‌ಎಸ್‌ಎಸ್ ಹಾಗೂ ಕೆಲವು ರಾಜಕೀಯ ಶಕ್ತಿಗಳ ಪ್ರಭಾವವಿದೆ. ಈ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.ಯಾದಗಿರಿಯ ಪ್ರಗತಿಪರ ಸಂಘಟನೆಗಳು , ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಮುಖಂಡರು ಸೆ.25ರ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕೆ.ಎಸ್.ಡಿ.ಎಸ್.ಎಸ್.ಕೆ ತಾಲೂಕು ಸಂಚಾಲಕ ಬಸವರಾಜ ದೊಡ್ಡಮನಿ ಶೆಳ್ಳಗಿ, ಜಿಲ್ಲಾ ಮುಖಂಡ ಚಂದ್ರಶೇಖರ ಕಟ್ಟಿಮನಿ, ಸಿದ್ದಣ್ಣ ಸುರಪುರಕರ್, ಖಾಜಾಹುಸೇನ ಗುಡಗುಂಟಿ, ರಾಮಪ್ಪ ಬಿಜಾಸಪೂರ(ಬಬಲಾದ), ರಾಮಣ್ಣ ಶೆಳ್ಳಿಗಿ, ಬಾಲು ಗುಂಡುಗುರ್ತಿ, ಬಸವರಾಜ ಬೊಮ್ಮನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.