ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಕಂಟೇನರ್ ಲಾರಿಯಲ್ಲಿ ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಜಾನುವಾರುಗಳನ್ನು ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಕಾರ್ಯಕರ್ತರು ರಕ್ಷಿಸಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಪಟ್ಟಣದ ಬೆಂಗಳೂರು- ಮೈಸೂರು ರಸ್ತೆಯ ಪ್ರವಾಸಿ ಮಂದಿರದ ಬಳಿ ಬುಧವಾರ ಮುಂಜಾನೆ ನಡೆದಿದೆ.ಪ್ರಕರಣ ಸಂಬಂಧ ರಕ್ಷಣಾ ಪಡೆ ಸಂಸ್ಥಾಪಕ ಅಧ್ಯಕ್ಷ ಪುನೀತ್ ಕೆರೆಹಳ್ಳಿ ನೀಡಿದ ದೂರಿನ ಅನ್ವಯ ಪೊಲೀಸರು, ಮೈಸೂರು ಬಡ ಮಖಾನ್ ಬಡಾವಣೆಯ ತಬ್ರಾಜ್, ಲಾರಿ ಚಾಲಕ ಮನ್ಸೂರ್ ಅಹಮದ್, ಕೆ.ಆರ್. ಪೇಟೆ ಕಿಕ್ಕೇರಿ ಹೋಬಳಿಯ ಬಸವನಹಳ್ಳಿಯ ಲೋಕೇಶ್ ವಿರುದ್ಧ ಬಿಎನ್ ಎಸ್ ಹೊಸ ಕಾಯ್ದೆ ರೀತ್ಯಾ ಅಕ್ರಮ ಗೋ ಸಾಗಾಣಿಕೆ ಮತ್ತು ಗೋ ಹತ್ಯೆ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಜೆಎಂಎಫ್‌ಸಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಿದ್ದಾರೆ.
ಕೆ. ಆರ್. ಪೇಟೆ ತಾಲೂಕಿನ ಬಸವನಹಳ್ಳಿಯಿಂದ ಕಂಟೇನರ್ ಲಾರಿಯಲ್ಲಿ ತಮಿಳುನಾಡಿನ ಕೃಷ್ಣಗಿರಿಗೆ ಅಕ್ರಮವಾಗಿ ಜಾನುವಾರಗಳನ್ನು ಸಾಗಿಸುತ್ತಿರುವ ಬಗ್ಗೆ ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತರಿಗೆ ಮಾಹಿತಿ ಲಭ್ಯವಾಗಿದೆ. ಸಂಘಟನೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕಾರ್ಯಕರ್ತರಾದ ಗೋಪೇಗೌಡ, ಪವನ, ಸುರೇಶ್ ಹಾಗೂ ಗೌತಮ್ ಎಂಬುವರು ತಾಲೂಕಿನ ಬೆಂಗಳೂರು - ಮೈಸೂರು ಹೆದ್ದಾರಿಯ ಗೆಜ್ಜಲಗೆರೆ ಬಳಿ ಲಾರಿ ತಡೆಯಲು ಯತ್ನಿಸಿದ್ದಾರೆ.ಈ ವೇಳೆ ಲಾರಿ ಚಾಲಕ ಮನ್ಸೂರ್ ಅಹಮದ್ ಸ್ಥಳದಿಂದ ಪರಾರಿಯಾಗುತ್ತಿದ್ದಾಗ ಹಿಮ್ಮೆಟ್ಟಿದ ಕಾರ್ಯಕರ್ತರು, ರಾತ್ರಿ ಹೆದ್ದಾರಿ ಗಸ್ತು ಕರ್ತವ್ಯದಲ್ಲಿದ್ದ 102 ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲಾರಿ ಪ್ರವಾಸಿ ಮಂದಿರ ಬಳಿ ಬರುತ್ತಿದ್ದಂತೆ ಪೊಲೀಸರು ಹಾಗೂ ಕಾರ್ಯಕರ್ತರ ತಂಡ ಲಾರಿಯನ್ನು ತಪಾಸಣೆ ನಡೆಸಿದಾಗ ಎಮ್ಮೆಗಳು, ಎತ್ತು, ಕರು ಸೇರಿ ಸುಮಾರು 30 ಜಾನುವಾರಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಮದ್ದೂರು ಠಾಣೆ ಪಿಎಸ್ಐ ಕೆ. ಮಂಜುನಾಥ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಿಪಿಐ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆರೋಪಿಗಳು ನ್ಯಾಯಾಂಗ ಬಂಧನಕ್ಕೆ:
ಮದ್ದೂರು: ತಮಿಳುನಾಡಿನ ಕಸಾಯಿಖಾನೆಗೆ ಗೋವುಗಳ ಸಾಗಾಣಿಕೆ ಮಾಡುತ್ತಿದ್ದ ಲಾರಿ ಚಾಲಕ ಹಾಗೂ ಸಹಾಯಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಪಟ್ಟಣದ ಜೆಎಂಎಫ್‌ಸಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಬುಧವಾರ ಸಂಜೆ ಆದೇಶ ಹೊರಡಿಸಿದೆ.ಪ್ರಕರಣ ಸಂಬಂಧ ಲಾರಿ ಚಾಲಕ ಮನ್ಸೂರ್ ಅಹ್ಮದ್ ಹಾಗೂ ಸಹಾಯಕ ಲೋಕೇಶ್ ರನ್ನು ಬಂಧಿಸಿ, ನಂತರ ಪೊಲೀಸರು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್ .ವಿ.ಕೋನಪ್ಪ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶ ನೀಡಿದರು. ಅಕ್ರಮ ಗೋ ಸಾಗಣಿಕೆ ವೇಳೆ ವಶಪಡಿಸಿಕೊಳ್ಳಲಾಗಿದ್ದ 30 ಜಾನುವಾರುಗಳನ್ನು ಪೊಲೀಸರು ತಾಲೂಕು ಕೊಪ್ಪದ ಗಣೇಶ ಗೋಶಾಲೆಯ ವಶಕ್ಕೆ ನೀಡಿದ್ದಾರೆ. ಅಲ್ಲಿ ಮೇವು ಮತ್ತು ಮೂಲ ಸೌಲಭ್ಯಗಳನ್ನು ನೀಡಿ ಆರೈಕೆ ಮಾಡಲಾಗುತ್ತಿದೆ.
;Resize=(128,128))
;Resize=(128,128))