ಮಕ್ಕಳ ಹಕ್ಕುಗಳ ರಕ್ಷಣೆ-ಸುರಕ್ಷತೆಗೆ ಆದ್ಯತೆ

| Published : Dec 14 2024, 12:45 AM IST

ಮಕ್ಕಳ ಹಕ್ಕುಗಳ ರಕ್ಷಣೆ-ಸುರಕ್ಷತೆಗೆ ಆದ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ಸಿಗಬೇಕೆಂಬ ದೃಷ್ಟಿಯಿಂದ ನಡೆಸುತ್ತಿರುವ ಮಕ್ಕಳ ವಿಶೇಷ ಗ್ರಾಮ ಸಭೆಗಳು ಹೆಚ್ಚು ಮಹತ್ವ ಪಡೆದಿವೆ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಕೊಟ್ರೇಶ್ ಹೇಳಿದರು.

ರಾಮನಗರ: ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ಸಿಗಬೇಕೆಂಬ ದೃಷ್ಟಿಯಿಂದ ನಡೆಸುತ್ತಿರುವ ಮಕ್ಕಳ ವಿಶೇಷ ಗ್ರಾಮ ಸಭೆಗಳು ಹೆಚ್ಚು ಮಹತ್ವ ಪಡೆದಿವೆ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಕೊಟ್ರೇಶ್ ಹೇಳಿದರು.

ತಾಲೂಕಿನ ಲಕ್ಷ್ಮೀಪುರ ಜನತಾ ರೂರಲ್ ಹೈಸ್ಕೂಲ್ ಆವರಣದಲ್ಲಿ ಶುಕ್ರವಾರ ನಡೆದ ಗ್ರಾಪಂ 2024-25ನೇ ಸಾಲಿನ ಮಕ್ಕಳ ವಿಶೇಷ ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸ್ಥಳೀಯ ಸರ್ಕಾರಗಳಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಗಳನ್ನು ನಡೆಸಲು ಸರ್ಕಾರ ಆದೇಶಿಸಿದೆ. ಅದರಂತೆ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಗಳು ಕೇವಲ ನಾಮಕಾವಾಸ್ಥೆಯಾಗದೆ, ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ರಕ್ಷಣೆಯ ಸಮಗ್ರ ಕಾರ್ಯಸೂಚಿ ಆಗಬೇಕು ಎಂಬ ಹಿನ್ನೆಲೆಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಅರ್ಥಪೂರ್ಣ ರೀತಿಯಲ್ಲಿ ನಡೆಸಿ ಮಾಹಿತಿ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಮಕ್ಕಳ ಅಧ್ಯಕ್ಷತೆಯಲ್ಲಿ ಮಕ್ಕಳಿಗಾಗಿಯೇ ನಡೆಸುತ್ತಿರುವ ಗ್ರಾಮ ಸಭೆಯಲ್ಲಿ ಮಕ್ಕಳು ತಮಗಿರುವ ಸಮಸ್ಯೆಗಳ ಬಗ್ಗೆ ನಿರ್ಬೀತಿಯಿಂದ ಮುಕ್ತವಾಗಿ ತಿಳಿಸಬಹುದು. ಒಂದು ವೇಳೆ ನಿಮಗೆ ಭಯವೋ ಅಥವಾ ಮುಜುಗರ ಎಂದನ್ನಿಸಿದರೆ ಪತ್ರದ ಮೂಲಕ ಬರೆದು ಸಲಹಾ ಪೆಟ್ಟಿಗೆಯಲ್ಲಿ ಹಾಕಬಹುದು. ಯಾವುದೇ ಕಾರಣಕ್ಕೂ ನಿಮಗೆ ಸಮಸ್ಯೆಗಳಿದ್ದಲ್ಲಿ ಬಗೆಹರಿಸುತ್ತೇವೆ ಎಂದು ಮಕ್ಕಳಿಗೆ ಕೊಟ್ರೇಶ್ ಸಲಹೆ ಮಾಡಿದರು. ಶಾಲೆ, ಮನೆ, ಸಮಾಜದಲ್ಲಿ ಏನೇ ಸಮಸ್ಯೆಗಳಿದ್ದರೂ, ಅಥವಾ ಗ್ರಾಮದ ಅಭಿವೃದ್ಧಿ ವಿಷಯಗಳಲ್ಲೂ ಮಕ್ಕಳಿಗೆ ಹೇಳಬೇಕೆನಿಸಿದ್ದು, ಕೇಳಬೇಕೆನಿಸಿದ್ದನ್ನು ಮುಕ್ತವಾಗಿ ಚರ್ಚಿಸಬಹುದು. ಮಕ್ಕಳಿಗೆ ಮುಕ್ತವಾಗಿ ಚರ್ಚಿಸಲು ಇದೊಂದು ಸದವಕಾಶವಾಗಿದ್ದು, ಬಾಲ್ಯದಿಂದಲೇ ಅವರು ಸಾಮಾಜಿಕ ವಿಷಯಗಳನ್ನು, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಇದೊಂದು ಸಹಕಾರಿಯಾಗುತ್ತದೆ. ಮಕ್ಕಳಲ್ಲಿ ಆತ್ಮಸ್ಥೈರ್ಯ ಬೆಳೆಸಲು ಮಕ್ಕಳ ಗ್ರಾಮ ಸಭೆಗಳು ಪೂರಕ. ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಲು ಅನುವಾಗಲಿದೆ. ಇಂತಹ ಸಭೆಗಳಲ್ಲಿ ಪಾಲ್ಗೊಳ್ಳಲು ಶಾಲಾ ಶಿಕ್ಷಕರು, ಮನೆಯಲ್ಲಿ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಕೊಟ್ರೇಶ್‌ ಹೇಳಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಶಂಕರ್ ಮಾತನಾಡಿ, ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಮಕ್ಕಳ ಸ್ಥಿತಿಗತಿ, ಶಿಕ್ಷಣ, ಆರೋಗ್ಯ ಮತ್ತು ಅವರ ಅಭಿವೃದ್ಧಿ ಬಗ್ಗೆ ಅವರಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ಇಲಾಖಾ ಅಧಿಕಾರಿಗಳ ಮೂಲಕ ಮಾಹಿತಿ ಒದಗಿಸಲಾಗುವುದು. ಇದರಿಂದ ಮಕ್ಕಳು ಅವರ ಹಕ್ಕು ಬಾಧ್ಯತೆಗಳ ಬಗ್ಗೆ ತಿಳಿದುಕೊಳ್ಳುವ ಜೊತೆಗೆ ಗ್ರಾಮದ ಅಭಿವೃದ್ಧಿ ಬಗ್ಗೆಯೂ ಸಾಕಷ್ಟು ವಿಷಯಗಳ ಬಗ್ಗೆ ಸಮಾಲೋಚನೆ ಮಾಡಬಹುದು. ಮಕ್ಕಳಿಗೆ ಇಂತಹ ಸಭೆಗಳು ಹೆಚ್ಚು ಪ್ರಯೋಜನಕಾರಿ ಆಗಲಿವೆ. ಆದ್ದರಿಂದ ಮಕ್ಕಳನ್ನು ಗ್ರಾಮಸಭೆಗಳಲ್ಲಿ ಪಾಲ್ಗೊಂಡು ಸಮಸ್ಯೆಗಳ ಬಗ್ಗೆ ಚರ್ಚಿಸುವುದು, ಪರಿಹಾರ ಕಂಡುಕೊಳ್ಳಲು ಇದೊಂದು ಉತ್ತಮ ಅವಕಾಶ ಎಂದು ತಿಳಿಸಿದರು.

ಮಕ್ಕಳ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಿದ್ಯಾರ್ಥಿಗಳಾದ ಕು.ನಾಗಶ್ರೀ, ಕು.ಮಧುಸೂದನ್ ಎಂ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕನಕಾ, ಉಪಾಧ್ಯಕ್ಷೆ ಅಶ್ವಿನಿ, ಸದಸ್ಯರಾದ ನಾಗಣ್ಣ, ಅಶ್ವಿನಿ, ಪಂಚಾಯಿತಿ ಕಾರ್ಯದರ್ಶಿ ರೇಣುಕಪ್ಪ, ಸಿಆರ್‌ಪಿ ಸತೀಶ್, ಮಕ್ಕಳ ರಕ್ಷಣಾ ಘಟಕದ ಜ್ಯೋತಿ, ಸಿಡಿಪಿಓ ಇಲಾಖೆಯ ಮೇಲ್ವಿಚಾರಕಿ ನಿಂಬವ್ವ, ಸೇರಿದಂತೆ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

13ಕೆಆರ್ ಎಂಎನ್ 7.ಜೆಪಿಜಿ

ರಾಮನಗರ ತಾಲೂಕಿನ ಲಕ್ಷ್ಮೀಪುರ ಜನತಾ ರೂರಲ್ ಹೈಸ್ಕೂಲ್ ಆವರಣದಲ್ಲಿ ಶುಕ್ರವಾರ ನಡೆದ ಗ್ರಾಪಂನ 2024-25ನೇ ಸಾಲಿನ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಅತಿಥಿಗಳು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.