ಪ್ರತಿಯೊಬ್ಬರೂ ಸಂವಿಧಾನ ದಿನವನ್ನು ಆಚರಿಸುವುದಕ್ಕಿಂತ ಅನುಕರಿಸುವುದು ಅಗತ್ಯವಾಗಿದೆ ಹಾಗೂ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಭಾರತದ ಸಂವಿಧಾನದಿಂದ ಪ್ರಜಾಪ್ರಭುತ್ವದ ಮೂಲ ಆಶಯಗಳ ರಕ್ಷಣೆಯಾಗಿದೆ ಎಂದು ಯಳಂದೂರು ಸಿವಿಲ್ ನ್ಯಾಯಾಧೀಶರಾದ ಸುಜಾತ ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನವನ್ನು ನಾವು ಅಳವಡಿಸಿಕೊಂಡಿದ್ದು, ಪ್ರಜಾಪ್ರಭುತ್ವದ ಆಶಯಗಳಾದ ಸಮಾನತೆ, ಸ್ವಾತಂತ್ರ‍್ಯ, ಭ್ರಾತೃತ್ವದ ರಕ್ಷಣೆಗೆ ಸಂವಿಧಾನ ಕಾರಣವಾಗಿದೆ. ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳಂತೆಯೇ ಮೂಲಭೂತ ಕರ್ತವ್ಯಗಳನ್ನೂ ಸಹ ನಾವು ಪಾಲಿಸಬೇಕಾಗಿದೆ ಎಂದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಹಿರಿಯ ವಕೀಲ ಬಿ.ಎಂ. ಮಹದೇವಸ್ವಾಮಿ, ಅಂಬೇಡ್ಕರ್ ಅವರು ದೈತ್ಯ ಪ್ರತಿಭೆಯಾಗಿದ್ದು, ಆ ಕಾಲಕ್ಕೆ ಎಲ್ಲಾ ಸವಾಲುಗಳನ್ನೂ ಮೀರಿ ಸಂವಿಧಾನ ರಚಿಸಿದರು. ಆ ಸಂದರ್ಭಕ್ಕೆ ಅವರ ಸಹೋದ್ಯೋಗಿಗಳು ನೀಡಿದ ಅಸಹಕಾರಕ್ಕೆ ಜಗ್ಗದೆ ಈ ದೇಶದ ಆತ್ಮದಂತಿರುವ ಸಂವಿಧಾನವನ್ನು ನಮಗೆ ನೀಡಿದರು. ಭಾರತದ ಸಂವಿಧಾನವು ನಮ್ಮ ದೇಶದ ಧರ್ಮಗ್ರಂಥವಾಗಬೇಕಿದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ರೂಪಿಸಿದ ಅನುಭವ ಮಂಟಪದ ಮಾದರಿಯಲ್ಲಿ ಇಂದಿನ ಸಂಸತ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಜೈಶಂಕರ್ ಮಾತನಾಡಿ, ಪ್ರತಿಯೊಬ್ಬರೂ ಸಂವಿಧಾನ ದಿನವನ್ನು ಆಚರಿಸುವುದಕ್ಕಿಂತ ಅನುಕರಿಸುವುದು ಅಗತ್ಯವಾಗಿದೆ ಹಾಗೂ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಂ. ಮುತ್ತುರಾಜು, ಕಾರ್ಯದರ್ಶಿ ಜಿ.ಎನ್. ಸಂಪತ್, ಜಂಟಿ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್, ವಕೀಲರಾದ ಎಂ. ಚಿನ್ನಸ್ವಾಮಿ, ಸಿ.ಆರ್. ನಾಗರಾಜು, ಅಂಬಳೆ ಸಿದ್ದರಾಜು, ಕೆ.ಬಿ. ಶಶಿಧರ್, ಎಂ. ರವೀಶ್, ಡಾ.ರಾಜಣ್ಣ, ಸಿ.ಎಂ. ಮಹದೇವಸ್ವಾಮಿ, ಹೊನ್ನೂರು ನಾಗರಾಜು, ಶಾಂತರಾಜು, ಅಶ್ವಿನ್ ಕುಮಾರ್, ಕುಮಾರಸ್ವಾಮಿ, ಪರಶಿವಮೂರ್ತಿ, ಚಂದನಾ ಮತ್ತಿತರರು ಇದ್ದರು.