ಸಾರಾಂಶ
ಭಾಲ್ಕಿಯಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾಗೆ ಹಸಿರು ಬಾವುಟ ನಿಶಾನೆ ತೋರಿಸುವ ಮೂಲಕ ನ್ಯಾಯಾಧೀಶರಾದ ಆನಂದ ಕೊಣ್ಣೂರ ಚಾಲನೆ ನೀಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ನ್ಯಾಯಾಧೀಶರಾದ ಆನಂದ ಕೊಣ್ಣೂರ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಬೊಮ್ಮಗೊಂಡೇಶ್ವರ ವೃತ್ತದ ಹತ್ತಿರ ಮಂಗಳವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಪಿಸಿ ಮತ್ತು ಎನ್‌ಡಿಟಿ ಕೋಶ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ಬಾವುಟ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳ ರಕ್ಷಣೆಗಾಗಿ ನಾವೆಲ್ಲರೂ ಶ್ರಮ ಪಡಬೇಕಿದೆ. ಲಿಂಗಾನುಪಾತ ಅಸಮತೋಲನವಾದರೆ ಬದುಕು ಕಷ್ಟಕರವಾಗುತ್ತದೆ. ಹೆಣ್ಣುಮಕ್ಕಳ ಉಳಿವು ಮತ್ತು ಅವರ ರಕ್ಷಣೆಗಾಗಿ ಜಾಗೃತಿ ಮೂಡಿಸಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ನಾಣ್ಣುಡಿಯಂತೆ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯವಶ್ಯಕವಾಗಿದೆ. ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಸಮಾನತೆ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.ನ್ಯಾಯಾಧೀಶರಾದ ಅಭಿನಯ ಕುಲಕರ್ಣಿ ಮಾತನಾಡಿ, ಹೆಣ್ಣುಮಗುವನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸಿ, ನಿರಂತರವಾಗಿ ಅವಳು ಶಾಲೆಗೆ ಹೋಗುತ್ತಿರುವ ಬಗ್ಗೆ ಗಮನಹರಿಸಬೇಕು. ವರದಕ್ಷಿಣೆ ಮತ್ತು ಬಾಲ್ಯ ವಿವಾಹ ವಿರೋಧಿಸುವ ಮತ್ತು ಸರಳ ವಿವಾಹ ಪ್ರೊತ್ಸಾಹಿಸುವತ್ತ ಜಾಗೃತಿಯಾಗಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಾಲವಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಶಾಂತ ಬಿರಾದಾರ ಹೆಣ್ಣುಮಕ್ಕಳ ರಕ್ಷಣೆ ಮತ್ತು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.ಜಾಗೃತಿ ಜಾಥಾವು ಪಟ್ಟಣದ ಬೊಮ್ಮಗೊಂಡೇಶ್ವರ ವೃತ್ತದಿಂದ ಬಸ್‌ನಿಲ್ದಾಣ, ಡಾ. ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಹಾದು ಪುರಭವನದಲ್ಲಿ ಸಮಾವೇಶಗೊಂಡಿತು.
ಈ ಸಂದರ್ಭದಲ್ಲಿ ವಿವಿಧ ಶಾಲಾ ವಿದ್ಯಾರ್ಥಿನಿಯರೊಂದಿಗೆ ಮುಖ್ಯ ಶಿಕ್ಷಕ ಶಿವಕುಮಾರ ಮೇತ್ರೆ, ಸಿಆರ್‌ಪಿ ಕುಸುಮಕುಮಾರಿ ಮೋಹನ ರೆಡ್ಡಿ, ಅರ್ಚನಾ ಪವಾರ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ, ದೀಪಕ ಥಮಕೆ, ತಾಲೂಕು ಆರೋಗ್ಯ ಅಧಿಕಾರಿ ಶರಣಪ್ಪ ಮುಡಬಿ, ನ್ಯಾಯಾಲಯ ಸಿಬ್ಬಂದಿ ಅರ್ಜುನ ಸೇರಿದಂತೆ ಹಲವರು ಇದ್ದರು.