ಮಾನವ ಹಕ್ಕುಗಳ ರಕ್ಷಣೆ ಎಲ್ಲರ ಕರ್ತವ್ಯ

| Published : Dec 12 2024, 12:31 AM IST

ಸಾರಾಂಶ

ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಬಳ್ಳಾರಿ: ಸಮಾಜದಲ್ಲಿ ಕಾನೂನಾತ್ಮಕವಾಗಿ ಜೀವಿಸಲು ಸಂವಿಧಾನಾತ್ಮಕವಾಗಿರುವ ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ. ಶಾಂತಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರೀಡ್ಸ್ ಸಂಸ್ಥೆ, ಶಾಲಾ (ಪದವಿಪೂರ್ವ) ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ, ಬಳ್ಳಾರಿ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಅಂಗವಾಗಿ ನಗರದ ತಾಳೂರು ರಸ್ತೆಯ ಹೊಸ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು, ಆರೋಗ್ಯ, ವಸತಿ, ಉದ್ಯೋಗ ಹೊಂದುವ, ಶಿಕ್ಷಣ ಸೇರಿದಂತೆ ಹಲವಾರು ಹಕ್ಕುಗಳನ್ನು ಹೊಂದುವ ಅವಕಾಶವಿದೆ. ಮಾನವ ಹಕ್ಕುಗಳಿಗೆ ಚ್ಯುತಿಯಾಗದಂತೆ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಪ್ರತಿಯೊಬ್ಬ ವ್ಯಕ್ತಿಗೂ ಘನತೆ, ಗೌರವದಿಂದ ಬದುಕುವ ಹಕ್ಕು ಇದ್ದೂ, ಮಾನವ ಹಕ್ಕು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಸಮಾಜದ ಕಟ್ಟಕಡೆಯ ಪ್ರಜೆಯೂ ಸಹಬಾಳ್ವೆ ಜೀವನ ನಡೆಸಲು ಮಾನವ ಹಕ್ಕುಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಮಹಿಳಾ ಸಾರಥಿ-ಸ್ವಾವಲಂಬಿ ಜೀವನ:

ಮಾನವ ಹಕ್ಕುಗಳಲ್ಲಿ ದುಡಿಮೆಯ ಹಕ್ಕೂ ಒಂದಾಗಿದದೆ. ಅದರಲ್ಲೂ ಮಹಿಳೆಯರ ಸ್ವಾವಲಂಬಿ ಜೀವನ ಸಮಾನತೆ ಸಾರುತ್ತದೆ. ರೀಡ್ಸ್ ಸಂಸ್ಥೆಯಿಂದ ಮಹಿಳೆಯರಿಗೆ ಉಚಿತ ವಾಹನ ತರಬೇತಿ ನೀಡಿ ಸ್ವಾಭಿಮಾನದಿಂದ ಜೀವನ ನಡೆಸಲು ಅನುವು ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು.

ಇದೇ ವೇಳೆ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಮಹಿಳೆ ನಾರಾಯಣಮ್ಮ ಅವರಿಗೆ ರೀಡ್ಸ್ ಸಂಸ್ಥೆಯಿಂದ ನೀಡಲಾದ ಆಟೋ ರಿಕ್ಷಾದ ಕೀ ಹಸ್ತಾಂತರಿಸಿ, ಶುಭ ಹಾರೈಸಿದರು.

ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಜಿಲ್ಲಾ ನ್ಯಾಯಾಲಯದ ಆವರಣದಿಂದ ಆರಂಭಗೊಂಡು ಕನಕ ದುರ್ಗಮ್ಮ ದೇವಸ್ಥಾನ ಮಾರ್ಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣಕ್ಕೆ ತಲುಪಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು, ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ, ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ರಾಘವೇಂದ್ರ ಗೌಡ, ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ. ಪ್ರಮೋದ್, ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಾಸುದೇವ ಗುಡಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಸೇರಿದಂತೆ ನ್ಯಾಯಾಧೀಶರೂ ಹಾಗೂ ರೀಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಿ. ತಿಪ್ಪೇಶಪ್ಪ, ನ್ಯಾಯಾಲಯದ ಸಿಬ್ಬಂದಿ, ರೀಡ್ಸ್ ಸಂಸ್ಥೆಯ ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಇತರರು ಉಪಸ್ಥಿತರಿದ್ದರು.