ಮಾನವ ಹಕ್ಕು ರಕ್ಷಣೆ ನಮ್ಮೆಲ್ಲರ ಕರ್ತವ್ಯ

| Published : Dec 17 2023, 01:45 AM IST

ಸಾರಾಂಶ

ಮಾನವ ಹಕ್ಕು ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚಿದಾನಂದ ಆನೂರ ಅಭಿಮತ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಅಡಿಯಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಜರುಗಿತು.

ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ವಿಜಯಪುರ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚಿದಾನಂದ ಆನೂರ ಮಾತನಾಡಿ, ಮಾನವ ಹಕ್ಕುಗಳ ಉಲ್ಲಂಘನೆ ತಡೆಗಟ್ಟಿ, ಮಾನವ ಹಕ್ಕುಗಳ ರಕ್ಷಣೆ ಮಾಡಿ ಎಲ್ಲರೂ ವ್ಯಕ್ತಿತ್ವ ವಿಕಸನ ಮಾಡಿಕೊಂಡು ಸಮಾಜದಲ್ಲಿ ಘನತೆ, ಗೌರವ, ಸ್ವಾಭಿಮಾನ, ಸಭ್ಯತೆಯಿಂದ ಬಾಳುವಂತೆ ಮಾಡುವುದು ಅತಿ ಅವಶ್ಯವಾಗಿದೆ ಎಂದು ಹೇಳಿದರು.

ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ವೈ. ತಮ್ಮಣ್ಣ ಜಾತಿ, ಧರ್ಮ, ಭಾಷೆ, ಆರ್ಥಿಕ ಸ್ಥಾನಮಾನಗಳ ಹಿನ್ನೆಲೆಯಲ್ಲಿ ತಾರತಮ್ಯ ಮಾಡದೆ ಎಲ್ಲರನ್ನು ಸರಿ ಸಮಾನರನ್ನಾಗಿ ಕಾಣಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ಶ್ರೀನಿವಾಸನ, ಡಾ.ಕೆ.ಎ.ಪಾಟೀಲ, ಪ್ರೊ.ವಿ.ಎಸ್.ನಂದೀಶ, ಪ್ರೊ.ರೇಖಾ ಗಡಗಿ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.