ಶಾಸನ- ಸ್ಮಾರಕಗಳ ರಕ್ಷಣೆ ಎಲ್ಲರ ಜವಾಬ್ದಾರಿ: ಚಲುವರಾಯಸ್ವಾಮಿ

| Published : Feb 15 2025, 12:33 AM IST

ಶಾಸನ- ಸ್ಮಾರಕಗಳ ರಕ್ಷಣೆ ಎಲ್ಲರ ಜವಾಬ್ದಾರಿ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆರೆ- ಕಟ್ಟೆಗಳ ಉಳಿವಿಗೆ ಪ್ರತಿಯೊಬ್ಬರೂ ಸಹಕರಿಸಬೇಕು. ಒತ್ತುವರಿಯಾಗಿದ್ದರೆ ಅವುಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಕೆರೆಗಳು ನಮ್ಮೆಲ್ಲರ ಜೀವನಾಡಿಯಾಗಿರುವಾಗ ಅವುಗಳನ್ನು ಉಳಿಸಿಕೊಂಡು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಾಸನಗಳು ಮತ್ತು ಸ್ಮಾರಕಗಳನ್ನು ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಆತಗೂರು ಕಾಳಿ ಹೆಸರಿನ ನಾಯಿ ಶಾಸನ ಪ್ರತಿಷ್ಠಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಳೆಯ ಶಾಸನಗಳು, ಸ್ಮಾರಕಗಳು, ಪುರಾತನ ದೇಗುಲಗಳು ಮರೆಯಾಗುತ್ತಿವೆ. ಯಾರೋ ಅದನ್ನು ನೆನಪಿಸಿದಾಗ ಜನರ ಮನಸ್ಸಿಗೆ ತಲುಪಿಸಬೇಕು. ಅವುಗಳು ಕಳೆದುಹೋಗದಂತೆ ಕಾಪಾಡಬೇಕು ಎಂದು ತಿಳಿಸಿದರು.

ಭಾರತದಷ್ಟು ಇತಿಹಾಸವನ್ನು ವಿಶ್ವದ ಬೇರಾವುದೇ ರಾಷ್ಟ್ರವೂ ಹೊಂದಿಲ್ಲ. ಸಾವಿರಾರು ವರ್ಷಗಳ ಇತಿಹಾಸವನ್ನು ಭಾರತ ಹೊಂದಿದೆ. ಇತಿಹಾಸದ ತಳಹದಿಯ ಮೇಲೆ ಇಲ್ಲಿ ಸಂಸ್ಕೃತಿ, ಪರಂಪರೆ ಬೆಳೆದುಬಂದಿದೆ. ವಿದೇಶದವರು ತಮ್ಮಲ್ಲಿ ಸಿಕ್ಕಂತ ಸಣ್ಣ ಪುಟ್ಟ ಇತಿಹಾಸದ ಸಂಗತಿಗಳನ್ನು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತಾರೆ. ಆದರೆ, ವಾಸ್ತವ ಇತಿಹಾಸವನ್ನು ಜನರಿಗೆ ಪರಿಚಯಿಸುವಲ್ಲಿ ನಾವು ಹಿಂದುಳಿದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆರೆ- ಕಟ್ಟೆಗಳ ಉಳಿವಿಗೆ ಪ್ರತಿಯೊಬ್ಬರೂ ಸಹಕರಿಸಬೇಕು. ಒತ್ತುವರಿಯಾಗಿದ್ದರೆ ಅವುಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಕೆರೆಗಳು ನಮ್ಮೆಲ್ಲರ ಜೀವನಾಡಿಯಾಗಿರುವಾಗ ಅವುಗಳನ್ನು ಉಳಿಸಿಕೊಂಡು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

ನಮ್ಮಲ್ಲಿರುವ ಇತಿಹಾಸದ ವಿಶೇಷತೆಗಳು, ಶಾಸನಗಳು, ವೀರಗಲ್ಲುಗಳು, ಸ್ಮಾರಕಗಳು, ದೇವಸ್ಥಾನಗಳನ್ನು ಸಂರಕ್ಷಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಿದಾಗ ಅವರಿಗೂ ದೇಶದ ಇತಿಹಾಸವೇನೆಂಬುದು ತಿಳಿಯುತ್ತದೆ. ಆ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನ ಮಾಡೋಣ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ನಿವೃತ್ತ ಐಎಎಸ್ ಅಧಿಕಾರಿ ಡಾ.ಕೆ.ಎಚ್.ಗೋಪಾಲಕೃಷ್ಣೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಸಂಶೋಧಕರಾದ ತೈಲೂರು ವೆಂಕಟಕೃಷ್ಣ, ಮಹಮ್ಮದ್ ಕಲೀಂಮುಲ್ಲಾ. ಪ್ರೊ.ಸಿ.ಮಹದೇವ, ಹರವು ದೇವೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಹಾಜರಿದ್ದರು.