ಕನ್ನಡದ ಪರಂಪರೆ ರಕ್ಷಣೆ ಜೊತೆಗೆ ರಾಷ್ಟ್ರೀಯತೆಗೆ ಕೆಲಸ ಮಾಡಬೇಕು: ಒಡೆಯರ್ ಕರೆ

| Published : Oct 01 2024, 01:38 AM IST

ಕನ್ನಡದ ಪರಂಪರೆ ರಕ್ಷಣೆ ಜೊತೆಗೆ ರಾಷ್ಟ್ರೀಯತೆಗೆ ಕೆಲಸ ಮಾಡಬೇಕು: ಒಡೆಯರ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ವತಿಯಿಂದ ನಗರದ ಶಾರದಾ ಕಲ್ಯಾಣ ಮಂಟಪದಲ್ಲಿ ‘ಕರಾವಳಿಯ ಸಾಹಿತಿಗಳು, ಕಲಾವಿದರು, ಲೇಖಕರು, ಕವಿಗಳು, ಚುಟುಕು ಬರಹಗಾರರ ಸಮ್ಮೇಳನ’ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಾವು ಕನ್ನಡದ ಅನನ್ಯವಾದ ಪರಂಪರೆಯನ್ನು ಸಂರಕ್ಷಣೆ ಮಾಡಬೇಕು, ಜೊತೆಗೆ ಜೊತೆಗೆ, ಯಾವತ್ತೂ ನಾವು ಭಾರತಕ್ಕೋಸ್ಕರ, ರಾಷ್ಟ್ರೀಯತೆಗೊಸ್ಕರ ಒಂದಾಗಿ ಕೆಲಸ ಮಾಡಬೇಕು ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು.ಅವರು ಭಾನುವಾರ ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ವತಿಯಿಂದ ನಗರದ ಶಾರದಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ‘ಕರಾವಳಿಯ ಸಾಹಿತಿಗಳು, ಕಲಾವಿದರು, ಲೇಖಕರು, ಕವಿಗಳು, ಚುಟುಕು ಬರಹಗಾರರ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬ ಭಾರತೀಯರು ಕನ್ನಡಿಗರಲ್ಲ, ಆದರೆ ಪ್ರತಿಯೊಬ್ಬ ಕನ್ನಡಿಗರು ಭಾರತೀಯರೆ. ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂದು ಕುವೆಂಪು ಹೇಳಿದ್ದಾರೆ, ಭಾರತಮಾತೆಯ ಗರ್ಭದಲ್ಲಿ ಹುಟ್ಟಿರುವುದು ನಮ್ಮ ಕನ್ನಡಾಂಬೆ, ಆದ್ದರಿಂದ ನಾವೆಲ್ಲರೂ ಮೂಲತಃ ಭಾರತೀಯರೇ ಆಗಿದ್ದೇವೆ. ಈ ಚಿಂತನೆ ನಮ್ಮಲ್ಲಿ ಇರಬೇಕಾದ್ದು ಇಂದಿನ ಅತ್ಯಗತ್ಯವಾಗಿದೆ ಎಂದು ಹೇಳಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ ಮಾತನಾಡಿ, ಇದುವರೆಗೆ ಬಲಪಂಥೀಯ ಸಾಹಿತಿಗಳಿಗೆ ವೇದಿಕೆಗಳೇ ಇರಲಿಲ್ಲ, ಯಾರನ್ನೂ ಓಲೈಕೆ ಮಾಡುತ್ತಿದ್ದ ಕೆಲವು ಸಾಹಿತಿಗಳು ಬಿಜೆಪಿ ಮತ್ತು ಬಲಪಂಥೀಯರನ್ನು ತೆಗಳುವ ಕೆಲಸವಷ್ಟೇ ಮಾಡುತ್ತಿದ್ದರು. ಈಗ ಬಲಪಂಥಿಯ ಸಾಹಿತಿಗಳಿಗೆ, ಕಲಾವಿದರಿಗೆ ವೇದಿಕೆ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ವಿಜಯ್ ಕುಮಾರ್ ಕೊಡವೂರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ ಗಂಟಿಹೊಳೆ, ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಂಜನಿ ಹೆಬ್ಬಾರ್ ಉಪಸ್ಥಿತರಿದ್ದರು.ಸಮ್ಮೇಳನದ ಉದ್ಘಾಟನೆಯ ನಂತರ ಬದಲಾದ ರಾಜಕಾರಣದಿಂದ ಹಿಂದುಗಳ ಬದುಕು - ಸಾಹಿತ್ಯ ಮತ್ತು ಭಯೋತ್ಪಾದನೆಯಲ್ಲಿ ನಲುಗುತ್ತಿರುವ ಹಿಂದುತ್ವ ಎಂಬೆರಡು ವಿಚಾರಗೋಷ್ಠಿಗಳು ನಡೆದವು.

--------------ಮೈಸೂರು ರಾಜವಂಶಸ್ಥರೂ ಓಬಿಸಿಗೆ ಸೇರಿದವರು!

ಮೊದಲು ನನಗೆ ಜಾತಿಗೀತಿ ಗೊತ್ತಿರಲಿಲ್ಲ, ಜಾತಿಯ ಕಲ್ಪನೆಯೇ ಮೂಡಿರಲಿಲ್ಲ, ಚುನಾವಣೆ ಸಮಯದಲ್ಲಿ ನಾನು ಹಿಂದುಳಿದ ವರ್ಗದ ಅಭ್ಯರ್ಥಿ, ಮೈಸೂರು ಅರಸರು ಕೂಡ ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬುದು ನಂತರ ಗೊತ್ತಾಯ್ತು. ರಾಜವಂಶಸ್ಥರು ಕೂಡ ಒಬಿಸಿಯಾ ಎಂದು ಎಲ್ಲರೂ ನಗುತ್ತಾರೆ. ಆದರೆ ಜಾತಿ ಲೆಕ್ಕದಲ್ಲಿ ಮಾತನಾಡುತ್ತಿಲ್ಲ, ರಾಜಕೀಯ ಜೀವನದಲ್ಲಿ ಒಬಿಸಿ ಸಮುದಾಯದ ಸಮಸ್ಯೆ ಅರಿವಾಗಿದೆ, ಆದ್ದರಿಂದ ಓಬಿಸಿ ಸಮುದಾಯದ ಹಿತದೃಷ್ಟಿಯಿಂದ ಮಾತನಾಡುತ್ತಿದ್ದೇನೆ ಎಂದು ಒಡೆಯರ್ ಹೇಳಿದರು. ಜಾತಿ ವ್ಯವಸ್ಥೆಯ ಮೂಲಕವೇ ಭಾರತದ ವೈವಿಧ್ಯತೆ ಸಂರಕ್ಷಣೆ ಮಾಡಬಹುದು. ಕೆಲವೊಮ್ಮೆ ಜಾತಿ ಶಾಪವೂ ಆಗುತ್ತದೆ. ದುರುಪಯೋಗ ಕೂಡ ಆಗುತ್ತದೆ. ಆದ್ದರಿಂದ ಜಾತಿ ವ್ಯವಸ್ಥೆಯನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕು ಎಂದವರು ಸಲಹೆ ಮಾಡಿದರು.