ಸಂಸ್ಕೃತಿ, ದೇಶ, ಧರ್ಮ ಶ್ರೇಷ್ಠವಾದುದು. ಧರ್ಮ ಒಂದು ಕಣ್ಣು, ದೇಶ ಇನ್ನೊಂದು ಕಣ್ಣು. ಇವೆರಡು ಮನುಷ್ಯನ ಎರಡು ಕಣ್ಣುಗಳಿದ್ದಂತೆ. ಇದರಲ್ಲಿ ಒಂದು ಕಣ್ಣು ಮಾತ್ರ ಸರಿಯಿದ್ದರೆ ಸಾಲದು. ಎರಡು ಕಣ್ಣುಗಳೂ ಸರಿಯಾಗಿರಬೇಕು. ಹಾಗೆಯೇ ನಮ್ಮ ಧರ್ಮ, ದೇಶ, ಸಂಸ್ಕೃತಿಗೆ ಯಾವುದೇ ರೀತಿ ತೊಂದರೆ ಆಗದಂತೆ ರಕ್ಷಿಸಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶೃಂಗೇರಿ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮೆಣಸೆ ರಾಜೀವ ಗಾಂಧಿ ಸಂಸ್ಕೃತ ಕೇಂದ್ರೀಯ ವಿದ್ಯಾಲಯದಲ್ಲಿ ಶನಿವಾರ ನಡೆದ ಭಾರತೀಯ ಸಂತ ಮಹಾಪರಿಷತ್ತಿನ ಎರಡು ಮಹೋನ್ನತ ಕ್ರಿಯಾಯೋಜನೆಗಳ ಐತಿಹಾಸಿಕ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಪ್ರಾಚೀನ ಕಾಲದಿಂದಲೂ ದೇಶದಲ್ಲಿ ಜನರು ಪರಸ್ಪರ ಐಕ್ಯತೆ, ಸೌದಾರ್ಧತೆಯಿಂದ ಉತ್ತಮ ಜೀವನ ನಡೆಸಿಕೊಂಡು ಬರುತ್ತಿದ್ದರು. ಮಧ್ಯದಲ್ಲಿ ಕೆಲವರು ಇದನ್ನು ಸಹಿಸದೆ ಅಸೂಯೆಯಿಂದ ದೇಶದ ಮೇಲೆ ಆಕ್ರಮಣ ಮಾಡಿ ಇಲ್ಲಿ ವೈಮನಸ್ಸು, ದ್ವೇಷ ಭಾವನೆ ಭಿತ್ತಿ ನಮ್ಮ ಸಂಸ್ಕೃತಿ, ಪರಂಪರೆ ಹಾಳು ಮಾಡುವ ಕೆಲಸ ಮಾಡಿದರು. ನಮ್ಮವರೂ ಅವರ ಪ್ರಭಾವಕ್ಕೆ ಒಳಗಾದರು. ಸರಿಪಡಿಸುವ ಅವಕಾಶ ಸಿಗಲಿಲ್ಲ. ವಿಭೇದಗಳು ಬೆಳೆಯುತ್ತಾ ಹೋದವು ಎಂದು ವಿಷಾಧಿಸಿದರು.

ಭಾರತ ಹಿಂದಿನಿಂದಲೂ ವೈವಿಧ್ಯತೆಗೆ ಹೆಸರಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿವಿಧ ರಾಜ್ಯಗಳು, ಭಾಷೆಗಳು, ಸಂಸ್ಕೃತಿಯಲ್ಲೂ ಐಕ್ಯತೆ ಕಾಣುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಶ್ರೀಗಳೇ ವಿನ್ಯಾಸ ಮಾಡಿದ ಓಂಕಾರದ ಹೊಸ ಲಾಂಛನ ಬಿಡುಗಡೆ ಗೊಳಿಸಿದರು.

ಹರಿಹರಪುರ ಪೀಠಾಧೀಶ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀಗಳು ಆಶೀರ್ವಚನ ನೀಡಿ, ಭಾರತೀಯ ಸಂಸ್ಕೃತಿ ಶ್ರೇಷ್ಠ ಹಾಗೂ ಬಹುರೂಪಿ ಸಂಸ್ಕೃತಿಯಾಗಿದ್ದು, ಜಗತ್ತಿನ ಎಲ್ಲಾ ಸಂಸ್ಕೃತಿಗಳ ತಾಯಿಬೇರಾಗಿದೆ. ಆದರೆ, ಒಡೆದಾಳುವ ನೀತಿ, ಕುಟಿಲತೆಗಳಿಂದ ಇಂದು ಭಾರತೀಯ ಸಂಸ್ಕೃತಿ, ಧರ್ಮಕ್ಕೆ ತೊಂದರೆಯಾಗುತ್ತಿದೆ. ವೈವಿಧ್ಯತೆ ವೈರುಧ್ಯವಾಗಿ ತಿರುಚಲಾಗುತ್ತಿದೆ. ನಮ್ಮ ಸಂಸ್ಕೃತಿ ಬಲಹೀನವಾಗುತ್ತಿದೆ. ವಿಶ್ವಶಾಂತಿಗೆ ಮೂಲವಾದ ಭಾರತೀಯ ಸಂಸ್ಕೃತಿ, ಪರಂಪರೆ ರಕ್ಷಣೆ ಮಾಡಬೇಕಿದೆ ಎಂದರು.