ಸಾರಾಂಶ
ಕೂನಿಕೆರೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ-ಕಳಸ ಪ್ರತಿಷ್ಠಾಪನೆ ಕಾರ್ಯಕ್ಕೆ ನಂಜಾವದೂತ ಶ್ರೀ ಚಾಲನೆ
ಕನ್ನಡಪ್ರಭ ವಾರ್ತೆ ಹಿರಿಯೂರು
ಭಾರತ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ನೈಸರ್ಗಿಕವಾಗಿ ಸಂಪದ್ಭರಿತ ರಾಷ್ಟ್ರವಾಗಿದ್ದು ಧರ್ಮ, ಸಂಸ್ಕೃತಿ, ಆದರ್ಶ ಮೌಲ್ಯಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.ತಾಲೂಕಿನ ಕೂನಿಕೆರೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ-ಕಳಸ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಗವಂತನ ನಾಮ ಸ್ಮರಣೆ ಮಾಡಿದರೆ ಸಮಸ್ಯೆಗಳು ದೂರಾಗಿ ಎಲ್ಲವೂ ಶುಭವಾಗುತ್ತದೆ. ದೇವಾಲಯದಲ್ಲಿ ನಿರಂತರ ಧಾರ್ಮಿಕ ಚಟುವಟಿಕೆ ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ವೇದಾವತಿ ನದಿ ಪಾತ್ರದ ಕೂಗಳತೆ ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇಗುಲ ಪ್ರಮುಖ ಧಾರ್ಮಿಕ ಶಕ್ತಿ ಸ್ಥಳವಾಗಿದ್ದು ಪ್ರಸಕ್ತ ವರ್ಷ ಭೀಕರ ಬರಗಾಲ, ಕುಡಿವ ನೀರಿನ ಹಾಹಾಕಾರ, ಸೂರ್ಯನ ಪ್ರಖರ ತಾಪಕ್ಕೆ ಭೂಮಿ ಮೇಲಿನ ಸಕಲ ಜೀವ ರಾಶಿಗಳಿಗೆ ಸಂಕಷ್ಟ ಪರಿಸ್ಥಿತಿ ಎದುರಾಗಿದೆ. ಪರಿಶುದ್ಧ ಪ್ರಾರ್ಥನೆಯಿಂದ ಸಕಲ ಜೀವಿಗಳ ರಕ್ಷಕ ಭಗವಂತನ ಅನುಗ್ರಹದಿಂದ ವರುಣ ದೇವ ಕೃಪೆ ತೋರಿ ಸಕಲ ಜೀವರಾಶಿಗಳಿಗೆ ಒಳಿತನ್ನು ಕರುಣಿಸಲಿ ಎಂದರು.ಈ ವೇಳೆ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಶಿವಾನಂದ್, ಜಯಸಿಂಹ, ಶಿವರಾಂ, ಕೆ.ಸಿ.ಹೊರಕೇರಪ್ಪ, ವಸಂತ, ಹರಿಯಬ್ಬೆ ಹನುಮಂತರಾಯ, ಮಹೇಶ್ ಮುಂತಾದವರು ಹಾಜರಿದ್ದರು.