ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಪ್ರಸ್ತುತ ಕಾಲಘಟ್ಟದಲ್ಲಿ ಜೈನ ಸಿದ್ಧಾಂತವನ್ನು ಉಳಿಸುವುದಕ್ಕಿಂತ, ಪಾಲಿಸುವುದು ಮುಖ್ಯವಾಗಿದೆ ಎಂದು ಹೊಂಬುಜ ಜೈನ ಮಠದ ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.ಅವರು ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಮೂರನೇ ದಿನವಾದ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವದಿಸಿದರು.
ಧರ್ಮವನ್ನು ರಕ್ಷಿಸುವುದೆಂದರೆ ನಾವು ಧರ್ಮವನ್ನು ಪಾಲಿಸುವುದರಿಂದ ಮಾತ್ರ ಸಾಧ್ಯ. ನಮ್ಮ ಅಂತರಂಗ ಬಹಿರಂಗ ಆಚರಣೆ ಅಹಿಂಸೆಯಿಂದ ಕೂಡಿರಬೇಕು. ಯಾವುದೇ ವಿಚಾರಗಳನ್ನು ಅನೇಕ ದೃಷ್ಟಿಕೋನಗಳಿಂದ ತಿಳಿದುಕೊಂಡು ತ್ಯಾಗದ ಮೂಲಕ ಆತ್ಮಕಲ್ಯಾಣ ಮಾಡಿಕೊಂಡಾಗ ಶ್ರೇಷ್ಠನಾಗಬಹುದು. ತ್ಯಾಗದ ಸಂದೇಶ ಪಸರಿಸಲು ಮತ್ತು ನೈತಿಕತೆ ಉಳಿಯಲು ದೇಶಾದ್ಯಂತ ಬಾಹುಬಲಿಯ ಮೂರ್ತಿಗಳು ಸ್ಥಾಪನೆಯಾಗಿವೆ. ತೀರ್ಥಂಕರರು ಧರ್ಮಪ್ರಭಾವಕರೇ ಹೊರತು ಪ್ರಚಾರಕಲ್ಲ ಎಂಬ ಸತ್ಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.ರಾಜನಿಗೆ ತ್ಯಾಗ ಬುದ್ಧಿ ಇರಬೇಕು. ರಾಜನು ಧರ್ಮ ನಿಭಾಯಿಸಬೇಕು. ಸ್ವಾಭಿಮಾನಿಯಾಗಿದ್ದು ರಾಷ್ಟ್ರ ರಕ್ಷಣೆಗಾಗಿ ಮಾತ್ರ ಯುದ್ಧವನ್ನು ಮಾಡಬೇಕು. ಸಹೋದರರು ಪರಸ್ಪರ ಜಗಳ ಮಾಡಬಾರದು. ಹಿರಿಯರನ್ನು ಗೌರವಿಸಬೇಕು ಎಂದು ತೋರಿಸಿಕೊಟ್ಟ ಬಾಹುಬಲಿಯ ತತ್ವ ಸಿದ್ಧಾಂತ ಸತ್ಯವನ್ನು ಎತ್ತಿ ಹಿಡಿದಿದೆ. ಅಹಿಂಸೆ ತ್ಯಾಗದಿಂದ ನಡೆಯುವವರು ದೇಶವನ್ನು ಆಳಲು ಸಮರ್ಥರು ಎಂಬುದನ್ನು ಇತಿಹಾಸ ತೋರಿಸಿಕೊಟ್ಟಿದೆ ಎಂದರು.ಮೂಡಬಿದರೆ ಜೈನಮಠದ ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯರು ಆಶೀರ್ವದಿಸಿದರು.
ಆರಂಭದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮುಖ್ಯ ಸಂಪಾದಕ ಅಜಿತ್ ಹನುಮಕ್ಕನವರ್ ‘ಜಿನಸಿದ್ಧಾಂತದ ಶ್ರೇಷ್ಠತೆ- ಅನೇಕಾಂತವಾದ’ ಕುರಿತು ಉಪನ್ಯಾಸ ನೀಡಿದರು. ಅಹಿಂಸೆ, ಅನೇಕಾಂತವಾದ ಮತ್ತು ಪಂಚಾಣು ವ್ರತಗಳು ಜೈನಧರ್ಮದ ಶ್ರೇಷ್ಟ ತತ್ವಗಳಾಗಿದ್ದು ಇವುಗಳ ಪಾಲನೆಯಿಂದ ಸುಖ-ಶಾಂತಿ- ನೆಮ್ಮದಿ ಪಡೆಯಬಹುದು. ಭೋಗಿಗಳನ್ನು ಕೆಲವೇ ಸಮಯ ಸ್ಮರಿಸುತ್ತೇವೆ. ಆದರೆ ಬಾಹುಬಲಿಯಂತಹ ತ್ಯಾಗಿಗಳನ್ನು ಸದಾ ಗೌರವಿಸುತ್ತೇವೆ. ಯಾರು ತಮ್ಮ ಅಂತರಂಗದ ವೈರಿಗಳನ್ನು ಗೆಲ್ಲುತ್ತಾರೋ ಅವರೇ ಜೈನರು. ಬದುಕು ಮತ್ತು ಬದಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ರಾಮನ ತತ್ವ, ಶಕ್ತಿ ಈಗಲೂ ನಮ್ಮನ್ನು ಆಳುತ್ತದೆ. ಇದು ನಮ್ಮ ದೇಶದ ಹಿರಿಮೆಯಾಗಿದೆ. ಅನೇಕಾಂತವಾದದ ನೆರಳಲ್ಲಿ ಶಾಂತಿಯು ಆರಂಭವಾಗುತ್ತದೆ. ಪ್ರಕೃತಿ, ಸಮಾಜದ ತಳಪಾಯ ಉಳಿಸುವ ಮಹೋನ್ನತವಾದ ಸಿದ್ಧಾಂತ ಇದಾಗಿದ್ದು, ಇದನ್ನು ಜಗತ್ತು ಅರಿಯಬೇಕು ಎಂದು ಹೇಳಿದರು.ಯುಗಳ ಮುನಿಶ್ರೀಗಳಾದ ಶ್ರೀ ಅಮೋಘಕೀರ್ತಿ ಹಾಗೂ ಶ್ರೀ ಅಮರಕೀರ್ತಿ ಮಹಾರಾಜರು, ಮಾತಾಜಿಯವರು ಪಾವನ ಸಾನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಎಚ್.ಪಿ.ಸಿ.ಎಲ್.ನ ಡಿ.ಜಿ.ಎಂ. ನವೀನ್ ಕುಮಾರ್ ಎಂ.ಜಿ., ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿ ಜಿನೇಂದ್ರ ಕಣಗಾವಿ, ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ, ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ. ಪದ್ಮಪ್ರಸಾದ ಅಜಿಲ, ಸಮಿತಿ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣಕುಮಾರ್ ಇಂದ್ರ, ಸೇವಾಕರ್ತೃ ಸುನಂದ ಬಿ.ಪಿ. ಇಂದ್ರ ಇದ್ದರು.ಡಾ. ಶಾಂತಿ ಪ್ರಸಾದ ಸ್ವಾಗತಿಸಿದರು. ಶಾಲಿನಿ ನಿರಂಜನ ವಂದಿಸಿದರು. ನಮಿತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗ್ಗೆ ಪುರುಷಶ್ರೀ ಜಿನ ಭಜನಾ ತಂಡ, ಪುರುಷಗುಡ್ಡೆ, ಕುಪ್ಪೆಪದವು, ರೆಂಜಾಳ ಜೈನ್ ಮಿಲನ್ ಸದಸ್ಯರಿಂದ ಜಿನ ಭಜನೆ ನಡೆಯಿತು.ಸಂಜೆ ಮುಖ್ಯವೇದಿಕೆಯಲ್ಲಿ ಅಜಯ್ ವಾರಿಯರ್ ಇವರಿಂದ ಸಂಗೀತಯಾನ , ವಸ್ತುಪ್ರದರ್ಶನ ವೇದಿಕೆಯಲ್ಲಿ ಭರತ ನೃತ್ಯ, ನೃತ್ಯಸಂಗಮ ಪ್ರದರ್ಶನಗೊಂಡಿತು.
ಮೂರನೇ ದಿನದ ಮಹಾಮಜ್ಜನಬೆಳ್ತಂಗಡಿ: ವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಮೂರನೆಯ ದಿನವಾದ ಶನಿವಾರ ಬೆಳಿಗ್ಗೆ ನಿತ್ಯವಿಧಿ ಸಹಿತ ಶ್ರೀ ಪೀಠ ಯಂತ್ರಾರಾಧನಾ ವಿಧಾನ, ಧ್ವಜ ಪೂಜೆ, ಶ್ರೀ ಬಲಿ ವಿಧಾನ, ಮಧ್ಯಾಹ್ನ ಯಂತ್ರಾರಾಧನಾ ವಿಧಾನ, ಅಗ್ರೋದಕ ಮೆರವಣಿಗೆ, ಸಂಜೆ ತ್ಯಾಗಮೂರ್ತಿಗೆ 108 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ ಮಹಾಮಂಗಳಾರತಿ ನಡೆಯಿತು. ಶನಿವಾರ ರಜಾದಿನವಾದ್ದರಿಂದ ಭಕ್ತಸಂದೋಹ ಭಾರೀ ಸಂಖ್ಯೆಯಲ್ಲಿತ್ತು.
ಮಹಾಮಸ್ತಕಾಭಿಷೇಕದಲ್ಲಿ ಇಂದು
ಬೆಳ್ತಂಗಡಿ: ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಫೆ.25ರಂದು ಭಾನುವಾರದ ಕಾರ್ಯಕ್ರಮವು ಬೆಳಗ್ಗೆ ಮೂಡಬಿದರೆ, ಕಾರ್ಕಳ, ಕೆರ್ವಾಶೆ ಜೈನ್ ಮಿಲನ್ ಸದಸ್ಯರ ಜಿನ ಭಜನೆಯೊಂದಿಗೆ ಪ್ರಾರಂಭವಾಗಲಿದೆ. ಮಧ್ಯಾಹ್ನ 1 ಗಂಟೆಯಿಂದ 2.30ರ ವರೆಗೆ ಯುಗಳ ಮುನಿಶ್ರೀಗಳಾದ ಪರಮಪೂಜ್ಯ 108 ಶ್ರೀ ಅಮೋಘಕೀರ್ತಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮಹಾರಾಜರ ದೀಕ್ಷಾಮಹೋತ್ಸವದ ರಜತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. 3 ಗಂಟೆಯಿಂದ ಯುಗಳ ಮುನಿಶ್ರೀಗಳ ಸಾನಿಧ್ಯದಲ್ಲಿ ತಮಿಳುನಾಡು ತಿರುಮಲೈ ಶ್ರೀ ಕ್ಷೇತ್ರ ಅರಹಂತಗಿರಿ ಸ್ವಸ್ತಿಶ್ರೀ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಸೋಂದಾ ಶ್ರೀಕ್ಷೇತ್ರ ಸಾಧ್ವಿ ದಿಗಂಬರ ಜೈನ ಮಠದ ಸ್ವಸ್ತೀ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹಾಗೂ ಮೂಡುಬಿದರೆಯ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವದಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಎನ್.ಎಸ್. ಬೋಸರಾಜ್, ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ದ.ಕ. ಜಿಪಂ ಸಿಇಒ ಡಾ. ಆನಂದ್ ಕೆ. ಉಪಸ್ಥಿತರಿರುವರು. ವಿಶೇಷ ಉಪನ್ಯಾಸ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.