ಕಾಂಗ್ರೆಸ್‌ನಿಂದ ಭಯೋತ್ಪಾದಕರ ರಕ್ಷಣೆ: ಆರ್. ಅಶೋಕ್ ಆರೋಪ

| Published : Apr 13 2024, 01:45 AM IST / Updated: Apr 13 2024, 11:17 AM IST

ಕಾಂಗ್ರೆಸ್‌ನಿಂದ ಭಯೋತ್ಪಾದಕರ ರಕ್ಷಣೆ: ಆರ್. ಅಶೋಕ್ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ಸಿಗರು ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.

 ಮಂಡ್ಯ :  ಕಾಂಗ್ರೆಸ್ಸಿಗರು ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.

ನಗರದ ಹೊರ ವಲಯದಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ರಾಮೇಶ್ವರಂ ಕಫೆ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದವರನ್ನು ಸಹೋದರರ ಹೆಸರಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಕ್ಷಣೆ ಮಾಡಲು ಮುಂದಾಗಿದ್ದರು ಎಂದು ದೂರಿದರು.

ರಾಮೇಶ್ವರಂ ಹೊಟೇಲ್‌ನಲ್ಲಿ ನಡೆದ ಬ್ಲಾಸ್ಟ್ ಪ್ರಕರಣವನ್ನು ವ್ಯಾವಹಾರಿಕ ಈರ್ಷೆಯಿಂದ ಬೇರೆ ಹೊಟೇಲ್‌ನವರು ಕೃತ್ಯವನ್ನು ಮಾಡಿರಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದರು.ದೇಶದ್ರೋಹಿ ಕೆಲಸವನ್ನು ಸ್ಪರ್ಧಾತ್ಮಕ ಪೈಪೋಟಿಯಿಂದ ಬೇರೆ ಹೊಟೇಲ್‌ನವರು ಮಾಡಲು ಸಾಧ್ಯವೇ ಎಂದು ಅಶೋಕ್ ಪ್ರಶ್ನಿಸಿದರು.

ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣ ನಡೆದಾಗಲೂ ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡಿದ್ದರು. ಬೆಂಗಳೂರಿನ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ನಾವು ಒತ್ತಾಯಿಸಿದ್ದೆವು. ಆದರೂ ಸರ್ಕಾರ ವಹಿಸಲು ಹಿಂದೇಟು ಹಾಕಿತು. ವಿಷಯ ತಿಳಿದು ಎನ್‌ಐಎ ಸ್ವತಃ ಧಾವಿಸಿ ತನಿಖೆ ಆರಂಭಿಸಿತ್ತು. ಮೂರು ದಿನಗಳ ಬಳಿಕ ಸರ್ಕಾರ ಎನ್‌ಐಎಗೆ ವಹಿಸುವ ಕೆಲಸ ಮಾಡಿತು ಎಂದು ದೂರಿದರು.

ಬೆಂಗಳೂರಿನ ಜನ ಭಯಭೀತರಾಗಿದ್ದಾರೆ. ರಾಜ್ಯದಲ್ಲೂ ಒಂದು ರೀತಿಯಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ. ರಾಮೇಶ್ವರಂ ಹೊಟೇಲ್ ಬಾಂಬ್ ಬ್ಲಾಸ್ಟ್‌ನಿಂದಾಗಿ ಇಡೀ ಬೆಂಗಳೂರೇ ತಲ್ಲಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಯೋತ್ಪಾದಕರನ್ನು ಸಹೋದರರು ಎನ್ನುವ ಕಾಂಗ್ರೆಸ್ಸಿಗರು ಮೃಧು ಧೋರಣೆ ಅನುಸರಿಸುತ್ತಿದ್ದಾರೆ. ಭಯೋತ್ಪಾದಕ ಘಟನೆ ಎಂದು ಬಟಾ ಬಯಲಾಗಿದ್ದರೂ ಸಹ ಅವರ ಬಗ್ಗೆ ಸಾಫ್ಟ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ವಿಧಾನಸೌಧದಲ್ಲೇ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದರೂ ಏನೂ ಮಾಡಲಿಲ್ಲ. ದೇಶದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಇಂದು ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಅಂದಿನ ಸಭೆಯಲ್ಲಿ ನಾಲ್ಕೂ ಜಿಲ್ಲೆಗಳಿಂದ ಹೆಚ್ಚಿನ ಜನರು ಬರಲಿದ್ದಾರೆ. ದೊಡ್ಡ ಮಟ್ಟದ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಹೇಳಿದರು.

ಭ್ರಷ್ಟಾಚಾರದ ಕೂಪ ಕಾಂಗ್ರೆಸ್ ಪಕ್ಷ:

ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಕೂಪವಾಗಿದೆ. ಕಳೆದ ೧೦ ವರ್ಷಗಳಿಂದ ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಸಾಧನೆ ಮಾಡಿದ್ದಾರೆ. ಬಿಜೆಪಿಯವರು 10  ವರ್ಷಗಳಿಂದ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಕಾಂಗ್ರೆಸ್ಸಿಗರು ೫೦ ವರ್ಷ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಗರೀಬಿ ಹಠಾವೋ, ೩-ಜಿ, 4 -ಜಿ, ಭೂಮಿಯೊಳಗೆ, ಆಕಾಶದಲ್ಲಿ ಎಲ್ಲ ಕಡೆ ಕಾಂಗ್ರೆಸ್ಸಿಗರು ಭ್ರಷ್ಟಾಚಾರ ನಡೆಸಿರುವುದು ಜಗಜ್ಜಾಹೀರಾಗಿದೆ. ಪ್ರಧಾನಿ ಮೋದಿಯವರು ದೇಶ ಕಾಯುವ ಕಾವಲುಗಾರನಾಗಿ ಕೆಲಸ ಮಾಡಿದ್ದಾರೆ. ಅದರಿಂದಾಗಿ ನಾವು ರಾಜ್ಯದ 28 ಕ್ಕೆ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಸುಮಲತಾ ಸ್ಟಾರ್ ಕ್ಯಾಂಪೇನರ್:

ಸಂಸದೆ ಸುಮಲತಾ ಅಂಬರೀಶ್ ನಮ್ಮ ಪಕ್ಷದ ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾವಾಗ ದಿನಾಂಕ ಗೊತ್ತುಪಡಿಸುತ್ತಾರೋ ಅಂದು ಸುಮಲತಾ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇವಲ ಮಂಡ್ಯ ಮಾತ್ರವಲ್ಲದೆ, ಮೈಸೂರು, ಬೆಂಗಳೂರು, ಚಾಮರಾಜನಗರ ಸೇರಿ ಹಲವೆಡೆ ಶುದ್ಧ ಮನಸ್ಸಿನಿಂದ ಪ್ರಚಾರ ಮಾಡಲಿದ್ದಾರೆ. ಜೊತೆಗೆ ಮೋದಿಯವರ ಸಮಾವೇಶದಲ್ಲೂ ವೇದಿಕೆ ಮೇಲೆ ಇರಲಿದ್ದಾರೆ ಎಂದು ಹೇಳಿದರು.

ಮೈತ್ರಿ ಪಕ್ಷದ ಮುಖಂಡರಾದ ಸಿ.ಎಸ್.ಪುಟ್ಟರಾಜು, ಮೈ.ವಿ.ರವಿಶಂಕರ್, ಡಿ.ರಮೇಶ್, ಡಾ.ಎನ್.ಎಸ್.ಇಂದ್ರೇಶ್, ಬಿ.ಆರ್.ರಾಮಚಂದ್ರ, ಎಂ.ಎಸ್.ರಘುನಂದನ್, ರೂಪಾ, ಅಶೋಕ್ ಜಯರಾಂ, ಪ.ನಾ.ಪ್ರಸನ್ನ ಸೇರಿ ಇತರರಿದ್ದರು.

ನಾಳೆ ಮೈಸೂರಿಗೆ ಪ್ರಧಾನಿ ಮೋದಿ:ಪ್ರಧಾನಿ ನರೇಂದ್ರ ಮೋದಿಯವರು ಏ. ೧೪ರಂದು ಮೈಸೂರಿಗೆ ಭೇಟಿ ನೀಡಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಂದಿನ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಾಲ್ಕೂ ಜಿಲ್ಲೆಗಳ ಎನ್‌ಡಿಎ ಅಭ್ಯರ್ಥಿಗಳಾದ ಮೈಸೂರಿನ ಯಧುವೀರ್, ಮಂಡ್ಯದ ಎಚ್.ಡಿ. ಕುಮಾರಸ್ವಾಮಿ, ಚಾಮರಾಜನಗರದ ಬಾಲರಾಜು, ಹಾಸನದ ಪ್ರಜ್ವಲ್ ರೇವಣ್ಣ ಸೇರಿ ವಿವಿಧ ಮುಖಂಡರು ಭಾಗವಹಿಸುವರು ಎಂದರು.