ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ಭಾವಿ ಪ್ರಜೆಗಳಾದ ಮಕ್ಕಳ ಮೇಲಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.ನಗರದ ಗಾಜಿನ ಮನೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಾಗಿದ್ದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದಡಿ ಆಡಳಿತ ನಡೆಸಿದಾಗ ಮಾತ್ರ ರಾಷ್ಟ್ರವು ಜಾತ್ಯಾತೀತ, ಸಾಮರಸ್ಯ ದೇಶವಾಗಲು ಸಾಧ್ಯ. ಸಂವಿಧಾನದಿಂದ ಎಲ್ಲಾ ಸಮುದಾಯದವರಿಗೆ ನ್ಯಾಯ ಸಿಗಲಿದ್ದು ಈ ಹಿನ್ನಲೆಯಲ್ಲಿ ವಿವಿಧತೆಯಲ್ಲಿಯು ಏಕತೆಯನ್ನು ಕಾಪಾಡಿಕೊಳ್ಳಲಾಗಿದೆ ಎಂದರು. ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಪೀಠಿಕೆ ವಾಚಿಸಲಾಗುತ್ತಿದೆ. ಸಂವಿಧಾನ ಎಲ್ಲಾ ಧರ್ಮಗಳ ಮೇರು ಗ್ರಂಥವಾಗಿದ್ದು ಸಮಾಜದಲ್ಲಿ ಶಾಂತಿ ನೆಲೆಸಲು ಅದರ ಮಹತ್ವ ಅರಿತುಕೊಳ್ಳಬೇಕೆ ಎಂದು ತಿಳಿಸಿದರು.ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿಸಾಗಲು ದಾರಿದೀಪವಾಗಿದೆ. ದೂರದೃಷ್ಟಿ ಹೊಂದಿದ್ದ ನಮ್ಮ ಸಂವಿಧಾನದ ಶಿಲ್ಪಿಗಳು ಭಾರತದ ರಾಷ್ಟ್ರೀಯತೆಯ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದರು ಎಂಬುದನ್ನು ಇದು ತೋರಿಸುತ್ತದೆ. ಈ ಸಂವಿಧಾನದ ಮೂಲಕ ವಿಶ್ವದ ಅತಿ ದೊಡ್ಡ ಮತ್ತು ಯಶಸ್ವಿ ಪ್ರಜಾಪ್ರಭುತ್ವ ಎಂಬ ಗೌರವ ನಮಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿ, ಅನೇಕ ಹೋರಾಟಗಳ ಮೂಲಕ ದೇಶ ಸ್ವಾತಂತ್ರ್ಯಕಂಡಿದೆ. ಜಾತ್ಯಾತೀತ ದೇಶದಲ್ಲಿ ಎಲ್ಲರನ್ನು ಒಳಗೊಳ್ಳುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಬರೆದಿದಿದ್ದು ಪ್ರಪಂಚದಲ್ಲಿ ಮಾದರಿಯಾಗಿದೆ ಎಂದರು.ಮಹಾಪೌರರಾದ ಕೆ.ಚಮ್ಮನ್ ಸಾಬ್, ನಿವೃತ್ತ ಕೆಎಎಸ್ ಅಧಿಕಾರಿ ರುದ್ರಪ್ಪ ಹನಗವಾಡಿ ಮಾತನಾಡಿದರು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯರಾದ ಪ್ರೊ.ಮಲ್ಲಿಕಾರ್ಜುನ್ ಆರ್.ಹಲಸಂಗಿ ಉಪನ್ಯಾಸ ನೀಡಿದರು. ಪಾಲಿಕೆ ಉಪ ಮಹಾಪೌರ ಸೋಗಿ ಶಾಂತಕುಮಾರ್, ಆಯುಕ್ತೆ ರೇಣುಕಾ, ಮಹಾನಗರ ಪಾಲಿಕೆ ಸದಸ್ಯರಾದ ಮಂಜುನಾಥ ಗಡಿಗುಡಾಳ, ಸವಿತಾ ಹುಲ್ಲುಮನಿ, ಸುಧಾ, ಮಂಜುನಾಥ, ಮೀನಾಕ್ಷಿ, ಗೋಣಪ್ಪ, ಆಶಾ, ಪ್ರೊ.ಎ.ಬಿ.ರಾಮಚಂದ್ರಪ್ಪ ಸೇರಿ ಅನೇಕರಿದ್ದರು.