ಹನುಮಮಾಲೆ ವಿಸರ್ಜನೆ ಅಂಗವಾಗಿ ಬುಧವಾರ ನಗರದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ನೇತೃತ್ವದಲ್ಲಿ ನಡೆದ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ
ಗಂಗಾವತಿ: ಆಂಜನೇಯಸ್ವಾಮಿ ನಾಮಸ್ಮರಣೆಯ ಮೂಲಕ ದೇಶ, ಧರ್ಮ ರಕ್ಷಣೆಗೆ ಯುವಕರು ಸಂಕಲ್ಪ ಮಾಡುವ ಉದ್ದೇಶದಿಂದ ಹನುಮಮಾಲೆ ವ್ರತಾಚರಣೆ ನಡೆಯುತ್ತದೆ. ರಾಮ, ಹನುಮಂತ ಈ ರಾಷ್ಟ್ರದ ಪ್ರತೀಕರಾಗಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ತಿನ ರಾಷ್ಟ್ರೀಯ ಸಹ ಕಾರ್ಯದರ್ಶಿ ಕೇಶವರಾಜ ಹೇಳಿದರು.
ಹನುಮಮಾಲೆ ವಿಸರ್ಜನೆ ಅಂಗವಾಗಿ ಬುಧವಾರ ನಗರದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ನೇತೃತ್ವದಲ್ಲಿ ನಡೆದ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಂತರ ನಗರದ ಬಾಬು ಜಗಜೀವನರಾಮ್ ವೃತ್ತದಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದರು.ಪ್ರಭು ಶ್ರೀರಾಮನ ಮಂದಿರ ಕಟ್ಟುವ ಸಂಕಲ್ಪ ಮಾಡಿದ್ದ ವಿಶ್ವ ಹಿಂದು ಪರಿಷತ್ ದೇಶದ ಸಮಸ್ತ ಹಿಂದು ಸಮಾಜವನ್ನು ಒಗ್ಗೂಡಿಸಿ ಮಂದಿರ ನಿರ್ಮಾಣ ಮಾಡಿದೆ. ರಾಮಮಂದಿರ ಈ ದೇಶದ ಅಸ್ಮಿತೆಯಾಗಿದೆ. ಧರ್ಮ ಕಾರ್ಯದ ಮೂಲಕ ರಾಷ್ಟ್ರ ಕಾರ್ಯ ಮಾಡಬೇಕು. ಆದರೆ ಇಂದು ದೇಶದಲ್ಲಿ ಧರ್ಮ ವಿರೋಧಿ ಷಡ್ಯಂತರ ಜೋರಾಗಿ ನಡೆಯುತ್ತವೆ. ಹಿಂದು ಸಮಾಜದ ಮೇಲೆ ಜಿಹಾದಿ ಮತ್ತು ವಾಮ ಪಂಥೀಯ ಮನಸ್ಸುಗಳು ಆಕ್ರಮಣ ಮಾಡುತ್ತಿವೆ. ಇದಕ್ಕೆ ದೇಶದ ಯುವಕರು ತಕ್ಕ ಉತ್ತರ ನೀಡಬೇಕು ಎಂದರು.
ಕರ್ನಾಟಕದಲ್ಲಿ ಡ್ರಗ್, ಲಿಕ್ಕರ್ ಲಾಬಿಯಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಹಿಂದು ಸಮಾಜದ ವಿರುದ್ಧದ ಮಾನಸಿಕತೆ ನಿರ್ಮಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಇಂತಹ ಹಿಂದು ವಿರೋಧಿ ಶಕ್ತಿ ಎದುರಿಸಲು ಯುವಕರು ಸಜ್ಜಾಗಬೇಕು. ಹನುಮಂತನ ಸ್ಮರಣೆ ಮೂಲಕ ಸಮಾಜ ಸುಧಾರಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ವಿಎಚ್‌ಪಿ ರಾಷ್ಟ್ರೀಯ ಸಂಯೋಜಕ ನಿರಜ್‌ಭಾಯ್ ಮಾತನಾಡಿ, ವೈದ್ಯರ ವೇಷದಲ್ಲಿ ಉಗ್ರರು ದಾಳಿ ಮಾಡುವಂತ ಸನ್ನಿವೇಶ ನಾವು ಎದುರಿಸಬೇಕಾಗಿದೆ. ಹೀಗಾಗಿ ಹಿಂದು ಸಮಾಜ ಒಂದಾಗಿ ಕಾರ್ಯಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ವಿಶ್ವ ಹಿಂದು ಪರಿಷತ್ತಿನ ಧರ್ಮ ಪ್ರಸಾರದ ರಾಷ್ಟ್ರೀಯ ಪ್ರಮುಖ ಸೂರ್ಯನಾರಾಯಣಜೀ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಭಕ್ತಿ, ಧರ್ಮ ಶ್ರದ್ಧೆ ಮೂಡಿಸುವುದೇ ಹನುಮಮಾಲೆ ಧರಿಸುವ ಉದ್ದೇಶ. ಆಂಜನೇಯ ಹಿಂದುಗಳಿಗೆ ಪ್ರೇರಕ ಶಕ್ತಿಯಾಗಿದ್ದಾನೆ. ಶ್ರದ್ಧೆ, ಭಕ್ತಿ, ಸ್ವಾಮಿತ್ವ, ಬುದ್ಧಿಶಕ್ತಿ, ಧೈರ್ಯ ಇಂತಹ ಹತ್ತಾರು ಗುಣಗಳು ಹನುಮಂತನಲ್ಲಿವೆ. ಅಂತಹ ಗುಣಗಳು ನಮ್ಮಲ್ಲಿ ಬರಬೇಕೆಂಬ ಕಾರಣದಿಂದ ನಾವೆಲ್ಲರು ಮಾಲೆ ಧರಿಸಿ ವ್ರತಾಚರಣೆ ಮಾಡುತ್ತೇವೆ. ರಾಜ್ಯದ ಮೂಲೆ ಮೂಲೆಯಲ್ಲಿ ಯುವಕರು ಹನುಮಮಾಲೆ ಧರಿಸಿ ಧರ್ಮ ರಕ್ಷಣೆಯ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಹಿಂದು ಧರ್ಮ ನಾಶ ಮಾಡಲು ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ. ಜಿಹಾದಿ ಮತ್ತು ಮತಾಂತರದ ಮೂಲಕ ಹಿಂದು ಸಮಾಜ ಕ್ಷೀಣಿಸುವ ಕೆಲಸ ನಡೆಯುತ್ತಿದೆ. ಆಳುವ ಸರ್ಕಾರಗಳು ಕೂಡ ಅತಿಯಾದ ಓಲೈಕೆಗೆ ಮುಂದಾಗಿ ಹಿಂದುಗಳ ಆಚರಣೆಗೆ ಅಡ್ಡಿಯಾಗುತ್ತಿದೆ. ಯುವಕರನ್ನು ಶಕ್ತಿಹೀನ ಮಾಡುವ ಷಡ್ಯಂತ ನಡೆಯುತ್ತಿದೆ. ಡ್ರಗ್ಸ್, ಗಾಂಜಾದ ದೊಡ್ಡ ಜಾಲ ಈ ರಾಜ್ಯದಲ್ಲಿ ನಡೆಯುತ್ತಿದೆ. ಇದರ ಹಿಂದೆ ಅನ್ಯಮತೀಯ ಷಡ್ಯಂತ್ರವೂ ಇದೆ. ಹೀಗಾಗಿ ನಮ್ಮ ಹಿಂದು ಸಮಾಜದ ಯುವಕರು ಎಲ್ಲರು ಒಗ್ಗಟ್ಟಾಗಿ ರಾಷ್ಟ್ರ ಮತ್ತು ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ಆನೆಗೊಂದಿ ಸರಸ್ವತಿ ಪೀಠದ ನೀಲಕಂಠಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಧರ್ಮಸಭೆಯಲ್ಲಿ ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಶಿವಕುಮಾರ, ಕೊಪ್ಪಳ ಜಿಲ್ಲಾಧ್ಯಕ್ಷ ಡಾ. ಸಂಗಮೇಶ ಹಿರೇಮಠ, ಜಿಲ್ಲಾ ಉಪಾಧ್ಯಕ್ಷ ಉಗಮರಾಜ್ ಜೈನ್, ಜಿಲ್ಲಾ ಕಾರ್ಯದರ್ಶಿ ವಿನಯ ಪಾಟೀಲ್, ಬಸವರಾಜ ಸೂಗೂರು, ಪುಂಡಲೀಕ ದಳವಾಯಿ, ಸಂತೋಷ್, ಮಲ್ಲಿಕಾರ್ಜುನ ಮತ್ತಿತರು ಇದ್ದರು. ಸದಾನಂದಶೆಟ್ ವೈಯಕ್ತಿಕ ಗೀತೆ ಹಾಡಿದರು.
ನಗರಸಭೆ ಸದಸ್ಯೆ ಸುಚೇತಾ ಸಿರಿಗೇರಿ, ರಘುನಾಥ ಪವಾರ್ ತಂಡ ಹನುಮಮಾನ ಚಾಲೀಸ್ ಪಠಣ ಮಾಡಿದರು.ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣ ಸಾಹೇಬ ಜೊಲ್ಲೆ, ಸಂತೋಷ ಕೆಲೋಜಿ, ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ, ಲಲಿತಾರಾಣಿ ಶ್ರೀರಂಗದೇವರಾಯಲು, ತಿಪ್ಪೇರುದ್ರಸ್ವಾಮಿ, ಲಂಕೇಶ, ಚನ್ನಪ್ಪ ಮಳಗಿ, ಸಂಗಮೇಶ ಅಯೋಧ್ಯಾ ಸೇರಿದಂತೆ ವಿವಿಧ ಸಮಾಜದ ಮುಖಂಡರು ಧರ್ಮಸಭೆಯಲ್ಲಿ ಉಪಸ್ಥಿತರಿದ್ದರು.