ಬ್ಯಾರಿಕೇಡ್‌ನಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ

| Published : Jan 06 2025, 01:00 AM IST

ಸಾರಾಂಶ

ಬ್ಯಾರಿಕೇಡ್‌ಗೆ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿದ್ದ ಕಾಡಾನೆಯನ್ನು ರಕ್ಷಿಸಿದ ಘಟನೆ ನಡೆದಿದೆ. ಅರಣ್ಯ ಇಲಾಖಾ ಸಿಬ್ಬಂದಿ ಜೆಸಿಬಿ ಮೂಲಕ ಕಾಡಾನೆಯನ್ನು ರಕ್ಷಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬ್ಯಾರಿಕೇಡ್‌ಗೆ ಸಿಲುಕಿ ಹೊರಬಾರಲಾಗದೆ ಒದ್ದಾಡುತ್ತಿದ್ದ ಕಾಡಾನೆಯನ್ನು ರಕ್ಷಿಸಿದ ಘಟನೆ ಹುಣಸೂರು ತಾಲೂಕು ವ್ಯಾಪ್ತಿಯ ನಾಗರಹೊಳೆ ಉದ್ಯಾನವನದ ವೀರನ ಹೊಸಳ್ಳಿಯಲ್ಲಿ ಭಾನುವಾರ ನಡೆದಿದೆ.

ವೀರನಹೊಸಹಳ್ಳಿ ವ್ಯಾಪ್ತಿಯ ಅರಸುಹೊಸಕಟ್ಟೆಯ ಕೆರೆಯಲ್ಲಿ ಸಿಮೆಂಟ್ ಕಂಬದ ಬ್ಯಾರಿಕೇಡ್ ದಾಟಲು ಮುಂದಾದಾ ಕಾಡಾನೆ ಅದರಲ್ಲಿ ಸಿಲುಕಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ಕಾಡಾನೆಯನ್ನು ರಕ್ಷಿಸಿದರು.

ಶನಿವಾರ ರಾತ್ರಿ ಆಹಾರ ಅರಸಿ ಕಾಡಿನಿಂದ ಹೊರಬಂದು ಹೊಟ್ಟೆ ತುಂಬಿಸಿಕೊಂಡ ಸಲಗ ಭಾನುವಾರ ಮುಂಜಾನೆ ಅರಣ್ಯಕ್ಕೆ ಮರಳುವ ವೇಳೆ ಈ ಘಟನೆ ನಡೆದಿದೆ.

ಸುತ್ತಮುತ್ತಲ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಭತ್ತ, ರಾಗಿ ಫಸಲನ್ನು ತಿಂದು ಅರಣ್ಯದ ಕಡೆಗೆ ಕಾಡಾನೆ ದಾಟಲು ಯತ್ನಿಸಿ ಸಿಲುಕಿಕೊಂಡು ಪರದಾಡುತ್ತಿತ್ತು. ಕೊನೆಗೆ ಜೆ.ಸಿ.ಬಿ ತಂದು ಕಾಡಾನೆಯನ್ನು ಹಿಂಭಾಗದಿಂದ ಮೇಲೆತ್ತಿ ಸಿಮೆಂಟ್ ಕಂಬ ಅಲ್ಲಾಡಿಸಿ ಕಾಡಾನೆಯನ್ನು ಕಾಡು ಸೇರಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕಾಡಾನೆ ನಾಡಿಗೆ ಬರದಂತೆ ಅರಣ್ಯ ಇಲಾಖೆಯಿಂದ ರೈಲ್ವೇ ಹಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆದರೆ ಹಳಿಯನ್ನೂ ಲೆಕ್ಕಿಸದೆ ಕಾಡಾನೆಗಳು ದಾಟುವ ಸಾಹಸ ಮಾಡುತ್ತಿವೆ. ಇಂತಹ ಘಟನೆಗಳು ಆಗಾಗ್ಗೆ ಮರುಕಳಿಸುತ್ತಿದೆ.