ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನಗೊಳಿಸುವುದನ್ನು ಖಂಡಿಸಿ ನಗರದಲ್ಲಿ ಮಂಡ್ಯ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.ಸಿಲ್ವರ್ ಜ್ಯೂಬಿಲಿ ಉದ್ಯಾನವನದಲ್ಲಿ ಸೇರಿದ ಸಮಿತಿ ಕಾರ್ಯಕರ್ತರು ಬೆಂಗಳೂರು- ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದರು. ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಶಿಕ್ಷಣದ ಹಕ್ಕು ಕೊಟ್ಟಿದೆ. ಆದರೆ, ಅದನ್ನು ಕಸಿಯುವ ಕೆಲಸವನ್ನು ಸರ್ಕಾರ ಮಾಡಬಾರದು. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಬೇಕೇ ಹೊರತು ವಿವಿಗಳನ್ನು ಮುಚ್ಚಬಾರದು. ಇಂತಹ ನಿರ್ಧಾರ ಉನ್ನತ ಶಿಕ್ಷಣದ ಕನಸು ಕಾಣುವ ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ. ಮಾತ್ರವಲ್ಲದೆ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. ಮುಖ್ಯವಾಗಿ ವಿವಿ ಬಾಗಿಲು ಮುಚ್ಚಿದರೆ ಪ್ರಾದೇಶಿಕ ಅಸಮಾನತೆಗೂ ಪ್ರಮುಖ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣವನ್ನು ಪಡೆಯುವವರ ಸಂಖ್ಯೆ ಹೆಚ್ಚಿದೆ. ಹೀಗಿರುವಾಗ ವಿಶ್ವವಿದ್ಯಾಲಯಗಳ ವಿಲೀನ ಆಘಾತಕಾರಿಯಾದ ನಿಲುವು. ಮಂಡ್ಯ ವಿಶ್ವವಿದ್ಯಾನಿಲಯ ವ್ಯವಸ್ಥಿತ ಹಾಗೂ ಯೋಜಿತವಾಗಿ ನಡೆಯುತ್ತಿದೆ. ಆರ್ಥಿಕ ಸಂಪನ್ಮೂಲದಲ್ಲಿಯೂ ಹಿಂದೆ ಬಿದ್ದಿಲ್ಲ. ಸುಮಾರು ೧೦ ರಿಂದ ೧೨ ಕೋಟಿ ರು. ಆದಾಯ ಬರುತ್ತಿದೆ. ಇಂತಿರುವಾಗ ವಿಲೀನ ಪ್ರಕ್ರಿಯೆಯ ಕಾರಣ ಸ್ಪಷ್ಟವಾಗುತ್ತಿಲ್ಲ. ಜಿಲ್ಲೆಯಲ್ಲಿ ಒಂದು ವಿಶ್ವವಿದ್ಯಾಲಯವಿದ್ದರೆ, ಅಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುತ್ತದೆ. ಪಠ್ಯಕ್ರಮ ರಚನೆ, ಪರೀಕ್ಷೆ, ಪ್ರಸಾರಂಗ ಈ ಎಲ್ಲವೂ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಾ ಇಡೀ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ ಎಂದರು.ಬಜೆಟ್‌ನಲ್ಲಿ ವಿವಿಗೆ ಹೆಚ್ಚಿನ ಹಣ ಮೀಸಲಿಡಬೇಕು. ಇದರೊಂದಿಗೆ ೯ ವಿವಿ ವಿಲೀನ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಿರಂತರವಾಗಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ಪ್ರಾಂತ್ಯ ಅಧ್ಯಕ್ಷ ರಮೇಶ್‌ರಾಜು ಹಾಡ್ಯ, ಕರವೇ(ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಡಿ.ಆಶೋಕ್, ಕದಂಬಸೈನ್ಯ ಕನ್ನಡ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ರೈತ ಪರ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್, ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಅಪ್ಪಾಜಿಗೌಡ ಬೂದನೂರು, ಅಚ್ಯುತ ಜಯರಾಂ, ಹೊಳಲು ಶಿವಣ್ಣ, ರಾಜುಗೌಡ, ಮೋಹನ್, ಮಲ್ಲೇಶ್, ಉಮ್ಮಡಹಳ್ಳಿ ಗೇಟ್ ನಾಗರಾಜ್, ಬಸವೇಗೌಡ , ಜೋಸೆಫ್, ರಾಮು ಕೀಲಾರ, ಸಲ್ಮಾನ್, ಆರಾಧ್ಯ ಗುಡಿಗೇನಹಳ್ಳಿ, ಟಿ.ಎಂ.ರಮೇಶ್, ಮಹೇಂದ್ರ, ರಾಜುಗೌಡ, ನಿತ್ಯಾನಂದ ಇತರರಿದ್ದರು.