ಸಾರಾಂಶ
ಚಿಂಚೋಳಿಯಲ್ಲಿ ಒಕ್ಕೂಟದ ತಾಲೂಕು ಸಮಿತಿ ಮುಖಂಡರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿಂಚೋಳಿ
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಗೆ ಸರಕಾರ ಯಾವುದೇ ಕಾರಣಕ್ಕೂ ಮರುಜೀವ ನೀಡದಂತೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ತಾಲೂಕು ಸಮಿತಿ ಮುಖಂಡರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ರಾಮಶೆಟ್ಟಿ ಪವಾರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ನಾಡಿನ ಬಂಜಾರ, ಭೋವಿ, ಕೊರಮ, ಅಲೆಮಾರಿ ಸಮುದಾಯಗಳ ಸಾಂವಿಧಾನಿಕ ಮೀಸಲಾತಿ ಹಕ್ಕನ್ನು ಅಭದ್ರಗೊಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಸದಾಶಿವ ಆಯೋಗದ ವರದಿ ಏಕಪಕ್ಷಿಯವಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಬಂಜಾರ, ಭೋವಿ, ಕೊರಮ, ಕೊಂಚ, ಚಲವಾದಿ, ಅಲೆಮಾರಿ ಸೇರಿದಂತೆ ಬಹುಸಂಖ್ಯಾತ ಪರಿಶಿಷ್ಟ ಜಾತಿಯ ಸಮುದಾಯಗಳು ಹೋರಾಟ ಮಾಡುತ್ತಾ ಬರುತ್ತಿವೆ. ಆಯೋಗದ ವರದಿಗೆ ಮರುಜೀವ ನೀಡದಂತೆ ಸರಕಾರಕ್ಕೆ ಆಗ್ರಹಿಸಿದರು.
ಡಾ.ತುಕಾರಾಮ ಪವಾರ ಮಾತನಾಡಿ, ಅವೈಜ್ಞಾನಿಕ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ಪರಿಶಿಷ್ಟ ಜಾತಿಗಳನ್ನು ವರ್ಗೀಕರಣ ಮೀಸಲಾತಿ ಹಂಚಿಕೆ ಮಾಡಲು ಹೊರಟ ರಾಜ್ಯ ಸರಕಾರದ ತೀರ್ಮಾನಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಶೆನ ಪ್ರಶ್ನಿಸಿ ಅರ್ಜಿ ದಾಖಲಿಸಲಾಗಿದೆ. ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಯನ್ನು ತಡೆಯಬೇಕೆಂದು ಅಗ್ರಹಿಸಿದರು.ಪ್ರತಿಭಟನೆಯಲ್ಲಿ ಹೀರಾಸಿಂಗ ಜಾಧವ್, ಪುರಸಭೆ ಸದಸ್ಯ ಭೀಮರಾವ ರಾಠೋಡ, ರಾಜೂ ಪವಾರ, ಅಶೋಕ ಚವ್ಹಾಣ, ಗೋವಿಂದ ರಾಠೋಡ, ಸಂಜೀವ ಪವಾರ, ಖುಬೂ ಜಾಧವ್, ಖೀರು ಪವಾರ, ಸಂತೋಷ ಪವಾರ, ಮೇರವಾನ, ಶಾಮರಾವ ಪವಾರ, ತಾರಾಸಿಂಗ ಚವ್ಹಾಣ, ರಮೇಶ ರಾಠೋಡ, ರಾಮಚಂದ್ರ ಕಾರಭಾರಿ, ಲಿಂಬಾಜಿ ರಾಠೋಡ, ಗೋಪಾಲ ಜಾಧವ್, ಭಜನಸಿಂಗ, ಶಂಕರ, ಗೋವಿಂದ ಬಾವಿತಾಂಡಾ ಭಾಗವಹಿಸಿದ್ದರು.