ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020ಕ್ಕೆ ತಿದ್ದುಪಡಿ ತರಲು ಮುಂದಾಗಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ (ವಿಎಚ್‌ಪಿ) ಹಾಗೂ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಳ್ಳಾರಿ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020ಕ್ಕೆ ತಿದ್ದುಪಡಿ ತರಲು ಮುಂದಾಗಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ (ವಿಎಚ್‌ಪಿ) ಹಾಗೂ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಬೆಳಗಾವಿಯಲ್ಲಿ ಆರಂಭವಾಗಿರುವ ಚಳಿಗಾಲ ಅಧಿವೇಶನದಲ್ಲಿ ತಿದ್ದುಪಡಿ ತರಲು ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ. ಇದರಿಂದ ರಾಜ್ಯದಲ್ಲಿ ಗೋಹತ್ಯೆ ಹಾಗೂ ಗೋವುಗಳ ಅಕ್ರಮ ಸಾಗಾಟಕ್ಕೆ ಆಸ್ಪದ ಮಾಡಿಕೊಟ್ಟಂತಾಗಲಿದೆ. ಹಿಂದೂ ಸಮಾಜ ಪೂಜ್ಯನೀಯವಾದ ಗೋವುಗಳಿಗೆ ಹಿಂಸೆ ನೀಡಲು ಸರ್ಕಾರದ ತಿದ್ದುಪಡಿಯಿಂದ ಅನುಕೂಲವಾಗಲಿದ್ದು, ಯಾವುದೇ ಕಾರಣಕ್ಕೂ ತಿದ್ದುಪಡಿಗೆ ಮುಂದಾಗಬಾರದು. ರಾಜ್ಯ ಸರ್ಕಾರ ಕೂಡಲೇ ತನ್ನ ನಿಲುವುನಿಂದ ಹಿಂದೆ ಸರಿಯಬೇಕು. ಹಿಂದೂ ಸಮಾಜಕ್ಕೆ, ಭಾವನೆಗಳಿಗೆ ಧಕ್ಕೆ ತರುವ ನೀತಿಗಳನ್ನು ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಇಲ್ಲಿನ ನಗರೂರು ನಾರಾಯಣರಾವ್ ಪಾರ್ಕ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವಿಎಚ್‌ಪಿ ಹಾಗೂ ಬಿಜೆಪಿ ಸದಸ್ಯರು ಗಡಗಿಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಕಳಿಸಿದರು.ಕಲ್ಯಾಣಸ್ವಾಮಿ ಮಠದ ಶ್ರೀ ಕಲ್ಯಾಣಸ್ವಾಮಿ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಬಿಜೆಪಿ ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಎಚ್. ಹನುಮಂತಪ್ಪ, ಜಿ. ವೆಂಕಟರಮಣ, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ವಿಷ್ಣುವರ್ಧನರೆಡ್ಡಿ, ಕೆ.ಅಶೋಕ್, ವಿಜಯಲಕ್ಷ್ಮೀ ಹಿರೇಮಠ, ಗೋವಿಂದ ನಾಯಕ, ಕೆ. ಶ್ರೀರಾಮುಲು, ಅಯ್ಯನಗೌಡ, ಕೆ.ಶ್ರೀಕಾಂತಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.