ಸಾರಾಂಶ
ಚಾಮರಾಜನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿಶ್ ಶಾ ವಿರುದ್ಧ ಚಾಮರಾಜನಗರ ತಾಲೂಕು ಆದಿಕರ್ನಾಟಕ ಜನಾಂಗದ ಗಡಿಮನೆ ಮತ್ತು ಕಟ್ಟೆಮನೆ ಯಜಮಾನರು ಮತ್ತು ಕುಲಸ್ಥರು ಹಾಗೂ ಡಾ.ಅಂಬೇಡ್ಕರ್ ಸಂಘಗಳು ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಡಿ.24 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಗ್ಗೆ 10.30ಕ್ಕೆ ಡಾ.ಅಂಬೇಡ್ಕರ್ ಭವನದಿಂದ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾಡಳಿತ ಭವನ ಅಂಬೇಡ್ಕರ್ ಪುತ್ಥಳಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ಈ ಪ್ರತಿಭಟನೆಯಲ್ಲಿ ಸುಮಾರು 3ರಿಂದ 5 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿಭಟನೆಯಲ್ಲಿ ಆದಿಕರ್ನಾಟಕ ಜನಾಂಗದವರು, ಅಂಬೇಡ್ಕರ್ ಸಂಘಟನೆಗಳು, ದಲಿತ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸುವಂತೆ ಮಂಜುನಾಥ್ ಮನವಿ ಮಾಡಿದರು.ಅಮಿತ್ ಶಾ ಸಂಸತ್‌ನಲ್ಲಿ ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಫ್ಯಾಷನ್ ಆಗಿದೆ. ಇದರ ಬದಲು ಭಗವಂತನ ಸ್ಮರಣೆ ಮಾಡಿದ್ದರೆ ಏಳು ಜನ್ಮ ಇರುವವರೆಗೆ ಸ್ವರ್ಗ ದೊರೆಯುತಿತ್ತು ಎಂದು ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡಿರುವುದು ಖಂಡನೀಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಯೋಜಕ ಕೆ.ಎಂ.ನಾಗರಾಜು, ಹೊಂಗನೂರು ಗಡಿಯಜಮಾನ ವೀರಣ್ಣ, ಹರದನಹಳ್ಳಿ ಗಡಿಯಜಮಾನ ರವಿಕುಮಾರ್ ಮಾತನಾಡಿದರು. ಮಂಗಲ ಗಡಿ ಯಜಮಾನರಾದ ರಂಗಸ್ವಾಮಿ, ಶಿವಣ್ಣ, ಹರದನಹಳ್ಳಿ ಗಡಿ ಯಜಮಾನ ಶಿವಕುಮಾರ್ ಹಾಜರಿದ್ದರು.