ಅಂಬೇಡ್ಕರ್‌ ಕುರಿತ ಅಮಿತ್‌ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆ

| Published : Dec 20 2024, 12:47 AM IST

ಸಾರಾಂಶ

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಮಾನಿಸಿದ್ದಾರೆ.

ಹೊಸಪೇಟೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಮಾನಿಸಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಭೀಮವಾದ ದಲಿತ ಸಂಘರ್ಷ ಸಮಿತಿ ಮತ್ತು ಸ್ಲಂ ಜನರ ಸಂಘಟನೆ-ಕರ್ನಾಟಕ, ಜಿಲ್ಲಾ ಚಲವಾದಿ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳಿಂದ ನಡೆದ ಪ್ರತಿಭಟನೆಯಲ್ಲಿ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್ ಶಾ ಭಾವಚಿತ್ರಕ್ಕೆ ಪಾದರಕ್ಷೆಗಳಿಂದ ಹೊಡೆದು, ಭಾವಚಿತ್ರಗಳನ್ನು ಸುಟ್ಟು ಹಾಕಿದರು. ಇದೇ ವೇಳೆ ಅಂಬೇಡ್ಕರ್ ಹೆಸರನ್ನು ಜೋರಾಗಿ ಕೂಗಿ, ಅಂಬೇಡ್ಕರ್ ಎಂದರೆ ನಿಮಗೇಕೆ ಕಷ್ಟವಾಗುತ್ತದೆ? ಎಂದು ಪ್ರಶ್ನಿಸಿದರು.

ಅಂಬೇಡ್ಕರ್ ಅವರಿಂದಲೇ ಸತತವಾಗಿ ಮೂರು ಬಾರಿ ದೇಶದ ಗೃಹ ಮಂತ್ರಿಗಳಾಗಿದ್ದೀರಿ ಎಂಬುದನ್ನು ಮರೆತಂತಿದೆ. ಕೂಡಲೇ ಪ್ರಧಾನಮಂತ್ರಿಗಳು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ರಾಷ್ಟ್ರಪತಿ ಮಧ್ಯ ಪ್ರವೇಶಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಬಗ್ಗೆ ಮಾತಾಡಿದರೆ ಸಹಿಸಲ್ಲ. ನಾವು ಜೈ ಶ್ರೀರಾಮ್ ಬದಲು ಜೈ ಭೀಮ್ ಕೂಗುತ್ತೇವೆ ಎಂದು ಮುಖಂಡರು ಆಕ್ರೋಶಗೊಂಡರು.

ಬಿಜೆಪಿ ಚುನಾವಣೆ ಬರುವ ಸಂದರ್ಭದಲ್ಲಿ ಅಂಬೇಡ್ಕರ್ ಹೆಸರು ಹೇಳಿ ನಮ್ಮನ್ನು ಬಳಸಿಕೊಂಡು, ಅಧಿಕಾರ ದಕ್ಕಿದ ಮೇಲೆ ಅವಮಾನಿಸುತ್ತಾರೆ. ಇದೇ ರೀತಿ ಹಲವಾರು ಬಾರಿ ಬಿಜೆಪಿ ನಿಜವಾದ ಬಣ್ಣ ಪದೇಪದೇ ಬಯಲಾಗುತ್ತಿದೆ. ಬಿಜೆಪಿಯಲ್ಲಿರುವ ಅಂಬೇಡ್ಕರ್ ಪರವಾಗಿರುವ ಎಲ್ಲರೂ ಹೊರಗೆ ಬರಬೇಕು. ಇವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಸೋಮಶೇಖರ್ ಬಣ್ಣದಮನೆ, ಸಣ್ಣಮಾರೆಪ್ಪ, ರಾಮಚಂದ್ರ, ಪೂಜಾರಿ ದುರುಗಪ್ಪ, ರಾಮಕೃಷ್ಣ, ಪ್ರಕಾಶ್, ಶಿವಕುಮಾರ್, ಎನ್‌. ವೆಂಕಟೇಶ್, ವಾಸುದೇವ್, ಯರ‍್ರಿಸ್ವಾಮಿ, ಗಿರೀಶ್, ರಮೇಶ್, ಸಣ್ಣ ಈರಪ್ಪ ಮತ್ತಿತರರಿದ್ದರು.

ಹೊಸಪೇಟೆಯ ಅಂಬೇಡ್ಕರ್‌ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾವಚಿತ್ರ ಸುಟ್ಟು ಹಾಕಿದರು.