ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಹಾಗೂ ತಾಲೂಕು ಕಚೇರಿಯಲ್ಲಿನ ಆಡಳಿತ ವೈಪಲ್ಯ ಖಂಡಿಸಿ ರಾಜ್ಯ ರೈತ ಸಂಘ ಏಕೀಕರಣ ಸಮಿತಿ ಸದಸ್ಯರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ನೂರಾರು ಸಂಖ್ಯೆಯಲ್ಲಿ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ತಾಲೂಕು ಕಚೇರಿಯ ಮುಂಭಾಗ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಉತ್ಪಾದನಾ ವೆಚ್ಚ ಆಧರಿಸಿ ಬೆಂಬಲ ಬೆಲೆ ನೀಡದಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿ ದಳ್ಳಾಳಿಗಳ ಶೋಷಣೆಗೂ ಗುರಿಯಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರ ಬಗ್ಗೆ ಯಾವುದೇ ಸರ್ಕಾರಗಳಿಗೆ ಕಾಳಜಿ ಇಲ್ಲದಂತಾಗಿದೆ. ಶ್ರಮಕ್ಕೆ ತಕ್ಕ ಬೆಲೆ ಬೆಳೆಗಳಿಗೆ ಸಿಗುತ್ತಿಲ್ಲ. ರೈತರು ತಮ್ಮ ಸಣ್ಣ ಸಮಸ್ಯೆಗೂ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಸ್ಥಿತಿ ಇದೆ. ಸಮಸ್ಯೆ ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ಕೆಆರ್ ಎಸ್ ಜಲಾಶಯ ತುಂಬಿದರೂ ನಾಲಾ ಆಧುನೀಕರಣದ ನೆಪದಿಂದ ಮಳವಳ್ಳಿಯ ಭಾಗಕ್ಕೆ ನೀರು ಬಂದಿಲ್ಲ ಎಂದು ಕಿಡಿಕಾರಿದರು.
ರಾಜ್ಯ ಸಮಿತಿ ಮುಖಂಡ ಅಣ್ಣೂರು ಮಹೇಂದ್ರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿ ದಳ್ಳಾಳಿಗಳ ಶೋಷಣೆಗೆ ಗುರಿಯಾಗುತ್ತಿದ್ದಾರೆ. ಪ್ರತಿ ತಿಂಗಳು ತಹಸೀಲ್ದಾರ್ ಗಳು ರೈತರ ಕುಂದುಕೊರತೆ ಆಲಿಸಬೇಕು ಎಂದು ಆಗ್ರಹಿಸಿದರು.ಕಬ್ಬಿಗೆ ರಾಜ್ಯ ಸರ್ಕಾರ ಪ್ರತಿಟನ್‌ಗೆ 500 ರು. ಪ್ರೋತ್ಸಾಹ ಧನ ನೀಡಿ ಕಟಾವು ಮಾಡಿದ 15 ದಿನೊಳಗೆ ಹಣ ಪಾವತಿ ಮಾಡಬೇಕು. ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶೊ ಮಂಜೇಶ್ ಗೌಡ ಮಾತನಾಡಿ, ತಾಲೂಕು ಕಚೇರಿಗಳಲ್ಲಿ ಕೆಲಸ ವಿಳಂಬ ಮಾಡಬಾರದು. ಹದ್ದುಬಸ್ತು, ಪೋಡಿ, ತಿದ್ದುಪಡಿ, ಖಾತೆ ಬದಲಾವಣೆ, ಪೌತಿ ಖಾತೆ ಸೇರಿದಂತೆ ಅನೇಕ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯಬೇಕು. ಸರ್ಕಾರಿ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಬೇಕು ಸೇರಿದಂತೆ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.ಮನವಿ ಪತ್ರ ಸ್ವೀಕರಿಸಿ ತಹಸೀಲ್ದಾರ್ ಎಸ್.ವಿ.ಲೋಕೇಶ್ ಮಾತನಾಡಿ, ರೈತರ ಬೇಡಿಕೆಗಳನ್ನು ಮೂರು ಹಂತದಲ್ಲಿ ಬಗೆಹರಿಸಲಾಗುವುದು. ಕಳೆದ 7 ತಿಂಗಳಲ್ಲಿ ಆರೇಳು ವರ್ಷಗಳಿಂದ ಬಾಕಿ ಉಳಿದಿದ್ದ ಸುಮಾರು 5000 ಆರ್ ಟಿಐ ಕಡತ ವಿಲೇವಾರಿ ಮಾಡಲಾಗಿದೆ ಎಂದರು.
ಸಾಧ್ಯವಾದಷ್ಟು ಜನರ ಅಲೆದಾಟವನ್ನು ತಪ್ಪಿದ್ದು, ಸದ್ಯದಲ್ಲಿಯೇ ರೈತರನ್ನು ಒಳಗೊಂಡ ಹೋರಾಟಗಾರರ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಬಸವರಾಜು, ಪ್ರಧಾನ ಕಾರ್ಯದರ್ಶಿ ಡಿ.ಸಿ.ಬಸವಯ್ಯ, ರಾಜ್ಯ ಸಮಿತಿ ಮುಖಂಡ ಶಿವರಾಮು, ಮುಖಂಡರಾದ ಪ್ರಕಾಶ್, ಕೆ.ರಾಮಲಿಂಗೇಗೌಡ, ನಾಗೇಂದ್ರಸ್ವಾಮಿ, ಮಹೇಶ್, ಕೆ.ಜಿ.ಉಮೇಶ್, ಶಿವಲಿಂಗಯ್ಯ, ಪ್ರಭುಲಿಂಗ, ತಮ್ಮಣ್ಣಗೌಡ, ರಾಮೇಗೌಡ, ಮಹೇಶ್, ಶಿವಕುಮಾರ್, ಜಯರಾಮು ಪಾಲ್ಗೊಂಡಿದ್ದರು.