ಸಾರಾಂಶ
-ದಲಿತ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರ ಆಕ್ರೋಶ
ಕನ್ನಡಪ್ರಭ ವಾರ್ತೆ ರಾಮನಗರಕನಕಪುರ ತಾಲೂಕಿನ ಮಳಗಾಳು ಗ್ರಾಮದ ಎ.ಕೆ.ಕಾಲೋನಿಯಲ್ಲಿ ದಲಿತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ನಗರದ ಪೊಲೀಸ್ ಭವನದ ಎದುರು ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಎ.ಕೆ.ಕಾಲೋನಿಯಲ್ಲಿ ರೌಡಿಶೀಟರ್ ಹರ್ಷ ಅಲಿಯಾಸ್ ಕೈಮ ಎಂಬಾತನ ತಂಡ ದಾಳಿ ನಡೆಸಿ ಜಿಪಂ ಮಾಜಿ ಅಧ್ಯಕ್ಷ ವೈರಮುಡಿರವರ ಪುತ್ರ ಅನೀಶ್ ರವರ ಕೈ ಕಡಿದಿದೆ. ಆತನ ನೆರವಿಗೆ ಬಂದ ಲಕ್ಷ್ಮಣ, ಗೋವಿಂದರಾಜು ಹಾಗೂ ಮಹಿಳೆಯರ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ. ಈ ಘಟನೆ ನಡೆದು ಐದು ದಿನಗಳು ಕಳೆದರೂ ಪೊಲೀಸರು ಪ್ರಮುಖ ಆರೋಪಿ ಹರ್ಷನನ್ನು ವಶಕ್ಕೆ ಪಡೆಯದೆ ಕೇವಲ ನಾಲ್ಕು ಮಂದಿಯನ್ನು ಮಾತ್ರ ಬಂಧಿಸಿದ್ದಾರೆ ಎಂದು ದೂರಿದರು.
ಅನೀಶ್ ಮತ್ತು ಕುಟುಂಬದವರಿಗೆ ಸರ್ಕಾರ 1 ಕೋಟಿ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು. ಹಲ್ಲೆಗೊಳಗಾಗಿರುವ ಇತರರಿಗೂ ಪರಿಹಾರ ನೀಡಬೇಕು. ಅವರ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು. ಸಂತ್ರಸ್ತ ಕುಟುಂಬದವರು ಸೇರಿದಂತೆ ಎ.ಕೆ.ಕಾಲೋನಿಗೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.ತಾಮಸಂದ್ರ ವೃತ್ತದಲ್ಲಿರುವ ಭೋವಿ ಸಮುದಾಯದವರ ಮೇಲೆ ಜುಲೈ 17ರಂದು ಸವರ್ಣಿಯ ತಿಗಳ ಸಮುದಾಯದ ನಾಗಲಿಂಗಯ್ಯ ಮತ್ತು ಕುಟುಂಬದವರು ಮಾರಕಾಸ್ತ್ರಗಳಿಂದ ಹೆಂಗಸರು , ಮಕ್ಕಳ ಮೇಲೆ ದಾಳಿ ನಡೆಸಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಈ ಘಟನೆಯಲ್ಲಿ 12 ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿಯೂ 16 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದರು ಕೇವಲ ನಾಲ್ಕು ಮಂದಿಯನ್ನು ಮಾತ್ರ ಬಂಧಿಸಿದ್ದಾರೆ. ಕೂಡಲೇ ಪ್ರಮುಖ ಆರೋಪಿಗಳಾದ ನಾಗಮಲಿಂಗಯ್ಯ ಮತ್ತು ಮಂಜ ಎಂಬಾತನನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಪರ ಸಂಘಟನೆಗಳ ಮುಖಂಡರಾದ ಡಾ.ಜಿ.ಗೋವಿಂದಯ್ಯ, ಮಲ್ಲಿಕಾರ್ಜುನ್, ವೆಂಕಟೇಶ್ , ಹರೀಶ್ ಬಾಲು, ಶಿವಶಂಕರ್ , ದಿನೇಶ್ , ಶಿವಲಿಂಗಯ್ಯ, ಗುರುಮೂರ್ತಿ, ಕೋಟೆ ಕುಮಾರ್ , ಕೋಟೆ ಪ್ರಕಾಶ್ , ಸುರೇಶ್ ಮತ್ತಿತರರು ಭಾಗವಹಿಸಿದ್ದರು.