ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನೆರೆಯ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ, ಬಂಧನ ಖಂಡಿಸಿ ಮೈಸೂರಿನಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಕೆರೆ ನೀಡಿದ್ದ ಪ್ರತಿಭಟನೆಯಲ್ಲಿ ನಗರದ ಆರ್ಎಸ್ಎಸ್ ಶಾಖೆಯ ಪ್ರಮುಖರು, ಬಿಜೆಪಿ ಮುಖಂಡರು, ಕಾರ್ಯಕರ್ತರು, ವಿ.ಎಚ್.ಪಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಯ 400ಕ್ಕೂ ಹೆಚ್ಚು ಮಂದಿ ಜನಮಾವಣೆಗೊಂಡು ಉಳಿಸಿ ಉಳಿಸಿ ಬಾಂಗ್ಲಾ ದೇಶದ ಹಿಂದೂಗಳನ್ನು ಉಳಿಸಿ, ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರು.ಪ್ರತಿಭಟನೆಯಲ್ಲಿ ಅಸಂಖ್ಯಾತ ಸಂಖ್ಯೆಯ ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇಡೀ ವಾತಾವರಣವೇ ಕೇಸರಿಮಯವಾಗಿತ್ತು. ಭಾರತದಲ್ಲಿ ಎಲ್ಲಾ ಧರ್ಮೀಯರು ವಾಸಿಸುತ್ತಿದ್ದಾರೆ. ಆದರೆ ನೆರೆಯ ಬಾಂಗ್ಲಾದೇಶದಲ್ಲಿ ಧರ್ಮಪ್ರಚಾರ ನಡೆಸುವ ಹಿಂದೂಗಳ ಮೇಲೆಗೆ ಹಲ್ಲೆ ನಡೆಸಿ, ಬಂಧಿಸಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ನಂತರ ಹಿಂದೂ ಹಿತರಕ್ಷಣಾ ಸಮಿತಿಯ ಸದಸ್ಯರು ಮನವಿ ಪತ್ರವನ್ನು ನಗರದ ಸಿದ್ದಾರ್ಥ ಬಡಾವಣೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎಡಿಸಿ ಶಿವರಾಜು ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಆರ್ಎಸ್ಎಸ್ನ ಪ್ರಮುಖರಾದ ಡಾ. ವಾಮನ್ ರಾವ್ ಬಾಪಟ್, ಎಂ. ವೆಂಕಟರಾಮ್, ಲೋಹಿತ್ ಅರಸ್, ತಿಲಕ್ ಕುಮಾರ್, ಶಾಸಕ ಟಿ.ಎಸ್. ಶ್ರೀವತ್ಸ, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಬಿ.ಎಂ. ರಘು, ವಿಎಚ್ಪಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.