ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ಜಾರಿ ಖಂಡಿಸಿ ವಕೀಲರು ಕಲಾಪ ಬಹಿಷ್ಕರಿಸಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗ ಸೇರಿದ ವಕೀಲರು, ಪದೇ ಪದೇ ವಕೀಲರ ಮೇಲೆ ಹಲ್ಲೆಯಾಗುತ್ತಿದೆ. ಕಾನೂನು ಚೌಕಟ್ಟಿನಲ್ಲಿ ನ್ಯಾಯಾಕ್ಕಾಗಿ ಹೋರಾಟ ಮಾಡುವ ವಕೀಲರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ವಕೀಲರ ರಕ್ಷಣೆಗಾಗಿ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ನ್ಯಾಯಾಲಯದ ಅವರಣದಲ್ಲೆ ವಿವಿಧ ಕಾರಣಗಳಿಗಾಗಿ ವಕೀಲರು ಹಲ್ಲೆಗೊಳ್ಳಗಾಗುತ್ತಿದ್ದಾರೆ. ಇತ್ತೀಚೆಗೆ ರಾಜ್ಯದ ಗಡಿ ಭಾಗ ಹೊಸೂರು ನ್ಯಾಯಾಲಯದ ಆವರಣಲದಲ್ಲಿ ವಕೀಲರ ಮೇಲೆ ಹಲ್ಲೆ ನಡೆಸಲಾಗಿದೆ. ಇದನ್ನು ವಕೀಲರ ಸಂಘ ತೀವ್ರವಾಗಿ ಖಂಡಿಸಿದರು.ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಕನಗನಮರಡಿ ನಾಗರಾಜು ಮಾತನಾಡಿ, ಸರ್ಕಾರಗಳು ವಕೀಲರ ರಕ್ಷಣೆಗೆ ಕಾಯ್ದೆ ಜಾರಿ ಮಾಡಬೇಕು. ವಕೀಲರಿಗೆ ಸೇವಾ ತೆರಿಗೆ ಪಾವತಿಸುವಂತೆ ಆದೇಶಿಸಿದೆ. ವಕೀಲರು ಯಾವುದೇ ಸಂಬಂಳ ಪಡೆಯುವುದಿಲ್ಲ. ತಿಂಗಳಿಗೆ ಇಂತಿಷ್ಟು ಆದಾಯ ಎಂಬುದು ಇಲ್ಲ. ಈಗಷ್ಟೇ ವೃತ್ತಿಗೆ ಕಾಲಿಟ್ಟಿದ್ದಾರೆ. ಕೆಲವರು ಹಿರಿಯ ವಕೀಲರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ಆದಾಯದ ಮೂಲವೇ ಇಲ್ಲದ ವಕೀಲರು ಯಾವ ಆಧಾರದ ಮೇಲೆ ಸರ್ಕಾರ ಸೇವಾ ತೆರಿಗೆ ಪಾವತಿಸಬೇಕು. ಈ ಬಗ್ಗೆ ಸರ್ಕಾರ ಮರು ಪರಿಶೀಲನೆ ನಡೆಸಿ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ವಕೀಲರು ರೈತರ ಮಕ್ಕಳಾಗಿದ್ದು, ವ್ಯವಸಾಯದಲ್ಲಿ ತೊಡಗಿಕೊಂಡು ರೈತರು ಕೂಡ ಆಗಿದ್ದಾರೆ. ರಾಜ್ಯದ ವಕ್ಫ್ ಮಂಡಳಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಿ ರೈತರಿಗೆ ನೋಟಿಸ್ ಜಾರಿ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ಕೂಡಲೇ ರೈತರ ಪಹಣಿಯಲ್ಲಿ ನಮೂದಾಗಿರುವ ವಕ್ಫ್ ಹೆಸರನ್ನು ಕೈಬಿಡಬೇಕು. ಪಹಣಿಯಲ್ಲಿನ ಎಲ್ಲ ಲೋಪಗಳನ್ನು ಸರಿಪಡಿಸಿ ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಕೀಲರಾದ ನಲ್ಲಹಳ್ಳಿ ಸುರೇಶ್, ಕಿರಂಗೂರು ಜಯರಾಮ್, ಜಿ.ಬಿ.ಸುರೇಶ್, ಎರೇಗೌಡನಹಳ್ಳಿ ಆನಂದ್, ಡಿ.ಶೀನಯ್ಯ, ಲೋಕೇಶ್, ಅಮರನಾಥ್, ದೇವರಾಜು, ವರಲಕ್ಷ್ಮೀ, ಲಾವಣ್ಯ, ಪುಷ್ಪಲತಾ, ಅನಿತಾ, ಸ್ಪೂರ್ತಿ, ನಯನ ಸೇರಿದಂತೆ ಹಲವರು ಇದ್ದರು.