ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ವಕೀಲರ ಮೇಲೆ ಹಲ್ಲೆ ಮಾಡಿದ ಚಿಕ್ಕಮಗಳೂರು ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು. ವಕೀಲರ ಸಂರಕ್ಷಣಾ ಕಾಯ್ದೆಯನ್ನು ಈಗ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ವಕೀಲರ ಸಂಘದಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.ಚಿಕ್ಕಮಗಳೂರಿನಲ್ಲಿ ಹೆಲ್ಮೆಟ್ ಧರಿಸುವ ವಿಚಾರದಲ್ಲಿ ವಕೀಲ ಪ್ರೀತಂ ಎಂಬವರ ಮೇಲೆ ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿರುವುದನ್ನು ಸ್ಥಳೀಯ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ. ಚಿಕ್ಕಮಗಳೂರಿನಲ್ಲಿ ೧೯ ಜನ ವಕೀಲರ ಮೇಲೆ ವಿನಾಕಾರಣ ಸುಳ್ಳು ಮೊಕದ್ದಮೆಗಳನ್ನು ಹಾಕಿರುವುದು ಪೊಲೀಸ್ ಅಧಿಕಾರದ ದುರುಪಯೋಗವಾಗಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ವಕೀಲ ಸಮುದಾಯವನ್ನು ಪೊಲೀಸರು ನಡೆಸಿಕೊಳ್ಳುವ ರೀತಿಯನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಸಾಂವಿಧಾನಿಕ ಹಕ್ಕುಗಳು ಮತ್ತು ಕಾನೂನಿನ ಅಧಿಕಾರದ ನಿರ್ವಹಣೆಯಲ್ಲಿ ಸಂಯೋಜನೆ ಕೊರತೆ ಉಂಟಾದಾಗ ಇಂತಹ ಘಟನೆಗಳು ಜರುಗುತ್ತಿವೆ ಎಂದು ಪ್ರತಿಭಟನಾನಿರತ ವಕೀಲರು ಕಳವಳ ವ್ಯಕ್ತಪಡಿಸಿದರು.
ತಹಸೀಲ್ದಾರ್ ವಿಶ್ವಜೀತ್ ಮಹೆತಾರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಪತ್ರ ರವಾನಿಸಲಾಯಿತು.ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಬಸವರಾಜ, ಉಪಾಧ್ಯಕ್ಷ ಎ. ಅಂಬಣ್ಣಗೌಡ, ಪ್ರ. ಕಾರ್ಯದರ್ಶಿ ಎ. ಕರುಣಾನಿಧಿ, ಸಹ ಕಾರ್ಯದರ್ಶಿ ಮಹಾರಾಜ ರವಿ, ಪದಾಧಿಕಾರಿಗಳಾದ ರುದ್ರಪ್ಪ ಸಿ., ತ್ರಿವೇಣಿ ಜೆ., ಮಂಜುನಾಥ್ ಬಿ., ರಾಜು ಎಸ್.ಎಂ., ಹುಲುಗಪ್ಪ, ಸತೀಶ್ ಎಸ್.ಎಂ., ಉಮಾ ಶಂಕರ್ ಎಸ್., ವೆಂಕಟೇಶ್ವರಲು ಎಚ್., ಯೂಸುಫ್, ಮಂಜುನಾಥ ಕೆ., ಪಿ. ವೆಂಕಟೇಶ್, ವಕೀಲರಾದ ತಾರಿಹಳ್ಳಿ ಹನುಮಂತಪ್ಪ, ಕಾಕುಬಾಳು ಯರಿಸ್ವಾಮಿ, ಬಿ.ಟಿ. ದಯಾನಂದ, ಬಿ.ಸಿ. ಮಹಾಂತೇಶ್, ಬಿಸಾಟಿ ಮಹೇಶ್, ಜವಳಿ, ಎಸ್. ಸತೀಶ್, ಸೌದಾಗರ್, ನಾಗಭೂಷಣರಾವ್, ವೀರನಗೌಡ, ರಮೇಶ್ ಮತ್ತಿತರರಿದ್ದರು.