ಸುಳ್ವಾಡಿ ಇಮ್ಮಡಿ ಮಹಾದೇವಸ್ವಾಮಿಗೆ ಜಾಮೀನು ವಿರೋಧಿಸಿ ಪ್ರತಿಭಟನೆ

| Published : Nov 15 2025, 01:30 AM IST

ಸುಳ್ವಾಡಿ ಇಮ್ಮಡಿ ಮಹಾದೇವಸ್ವಾಮಿಗೆ ಜಾಮೀನು ವಿರೋಧಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಮೇಲ್ಭಾಗದಲ್ಲಿ ಹೊಸ ಗೋಪುರ ನಿರ್ಮಾಣ ಮಾಡುವ ಸಂದರ್ಭದಲ್ಲಿ ತಯಾರಿಸಿದ್ದ ಪ್ರಸಾದಕ್ಕೆ ಇಮ್ಮಡಿ ಮಹದೇವಸ್ವಾಮಿ ಹಾಗೂ ಈತನ ಸಹಚರರು ವಿಷ ಬೆರೆಸಿದ್ದರು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಪ್ರಸಾದಕ್ಕೆ ವಿಷ ಬೆರೆಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಇಮ್ಮಡಿ ಮಹಾದೇವಸ್ವಾಮಿಗೆ ನೀಡಿರುವ ಜಾಮೀನು ರದ್ದುಪಡಿಸುವಂತೆ ಆಗ್ರಹಿಸಿ ವಿಷ ಪ್ರಸಾದ ಭಾದಿತರು ದೇವಸ್ಥಾನದ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಮೇಲ್ಭಾಗದಲ್ಲಿ ಹೊಸ ಗೋಪುರ ನಿರ್ಮಾಣ ಮಾಡುವ ಸಂದರ್ಭದಲ್ಲಿ ತಯಾರಿಸಿದ್ದ ಪ್ರಸಾದಕ್ಕೆ ಇಮ್ಮಡಿ ಮಹದೇವಸ್ವಾಮಿ ಹಾಗೂ ಈತನ ಸಹಚರರು ವಿಷ ಬೆರೆಸಿದ್ದರು.

ಬಿದರಹಳ್ಳಿ, ದೊಡ್ಡಾಣೆ, ಎಂ ಜಿ ದೊಡ್ಡಿ, ಸುಳ್ವಾಡಿ ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ಹಾಗೂ ಓಂ ಶಕ್ತಿ ಮಾಲಾಧಾರಿಗಳು ಪ್ರಸಾದ ಸ್ವೀಕರಿಸಿ 17ಕ್ಕೂ ಹೆಚ್ಚು ಜನರು ಮತಪಟ್ಟಿದ್ದಲ್ಲದೆ 150ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಇನ್ನು ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ಸಂಬಂಧ ನಾಲ್ವರು ಆರೋಪಿಗಳು ಕಳೆದ ಆರು ವರ್ಷ 10 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹಲವು ಬಾರಿ ಆರೋಪಿಗಳು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಿನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾ ಮಾಡಲಾಗಿತ್ತು.

ನ. 12 ರ ಮಂಗಳವಾರದಂದು ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಹೈಕೋರ್ಟ್ ವೈದ್ಯಕೀಯ ಚಿಕಿತ್ಸೆಗೆಂದು ಒಂದು ವರ್ಷದ ಅವಧಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಇದನ್ನು ಖಂಡಿಸಿ ವಿಷ ಪ್ರಸಾದ ಭಾದಿತರು ಏಕಾಏಕಿ ಪ್ರತಿಭಟನೆ ನಡೆಸಿದ್ದಾರೆ.

ವಿಷ ಪ್ರಸಾದ ಭಾದಿತರು ಮಾತನಾಡಿ, ಸುಳ್ವಾಡಿ ಕಿಚ್ ಗುತ್ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣದ ಮೊದಲ ಆರೋಪಿ ಇಮ್ಮಡಿ ಮಹಾದೇವಸ್ವಾಮಿಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ. ಈ ಜಾಮೀನು ಮಂಜೂರಿನಲ್ಲಿ ಯಾವೆಲ್ಲ ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ ಎಂಬುವುದರ ಬಗ್ಗೆ ಸಮರ್ಪಕ ಮಾಹಿತಿ ಸಿಕ್ಕಿಲ್ಲ ಜಾಮೀನು ಮಂಜೂರಾತಿಯ ಆದೇಶದ ಪ್ರತಿ ಸಿಕ್ಕಾಗ ಮಾತ್ರ ನಮಗೆ ಸಮಗ್ರ ಮಾಹಿತಿ ತಿಳಿಯುತ್ತದೆ.

ಈ ನಿಟ್ಟಿನಲ್ಲಿ ಸರ್ಕಾರ 17 ಜನರ ಸಾವಿಗೆ ಕಾರಣವಾಗಿರುವ ಇಮ್ಮಡಿ ಮಹದೇವಸ್ವಾಮಿ ಜಾಮೀನು ರದ್ದು ಮಾಡಲು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು. ಪ್ರಕರಣದ ಪ್ರಮುಖ ಆರೋಪಿಗೆ ಜಾಮೀನು ನೀಡಿರುವುದರಿಂದ ಸಾಕ್ಷಿದಾರರ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಸಾಕ್ಷ್ಯ ನಾಶಗೊಳ್ಳುವ ಭೀತಿ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ವಿಷಪ್ರಸಾದ ಸೇವನೆಯಿಂದ 17 ಭಕ್ತರು ಸಾವಿಗೀಡಾಗಿದ್ದು, 150ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಈಗಲೂ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸಂತ್ರಸ್ತರಿಗೆ ಈವರೆಗೂ ಸರ್ಕಾರ ಸೂಕ್ತ ಚಿಕಿತ್ಸೆ ಕೊಡಿಸುವುದಾಗಲಿ, ಪರಿಹಾರ ನೀಡುವುದಾಗಲಿ ಮಾಡಿಲ್ಲ ಇಂತಹ ಸಂದರ್ಭದಲ್ಲಿ ಜಾಮೀನು ನೀಡಿರುವುದರಿಂದ ಬಾದಿತರಿಗೆ ತೊಂದರೆಯಾಗಲಿದೆ ಎಂದು ಆಳಲನ್ನು ತೋಡಿಕೊಂಡರು.

ಇಮ್ಮಡಿ ಮಹದೇವಸ್ವಾಮಿಗೆ ಹೈಕೋರ್ಟ್ ನೀಡಿರುವ ಜಾಮೀನನ್ನು ರದ್ದು ಮಾಡಬೇಕು ಇಲ್ಲದಿದ್ದರೆ ನಾವೆಲ್ಲ ಸಾಮೂಹಿಕವಾಗಿ ಬೆಂಕಿ ಹಚ್ಚಿಕೊಂಡು ಸಾಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ವಿಷ ಪ್ರಸಾದ ಭಾದಿತ ಕುಟುಂಬದ ಸದಸ್ಯನೋರ್ವ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಈ ವೇಳೆ ಸಮೀಪದಲ್ಲಿದ್ದ ಸಂಬಂಧಿಕರು ಆತನನ್ನು ರಕ್ಷಣೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಸುಳ್ವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ಮೃತಪಟ್ಟ 17 ಜನರ ಭಾವಚಿತ್ರವನ್ನು ಹಿಡಿದು ತಮ್ಮ ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆಯಲ್ಲಿ ಸುಳ್ವಾಡಿ ಬಿದರಳ್ಳಿ ಮಾಟಳ್ಳಿ ಸೇರಿದಂತೆ ಇತರ ಗ್ರಾಮಗಳ ವಿಷ ಪ್ರಸಾದ ಬಾಧಿತ ಕುಟುಂಬಸ್ಥರು ಪಾಲ್ಗೊಂಡಿದ್ದರು.

---------------

14ಸಿಎಚ್ಎನ್16

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಆರೋಪಿ ಮಹದೇವಸ್ವಾಮಿಗೆ ಜಾಮೀನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.