ಗುಡಿಸಲು ಸುಟ್ಟಿದ್ದನ್ನು ಖಂಡಿಸಿ, ಕೆರೆ ಒತ್ತುವರಿ ತೆರವಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

| Published : Feb 09 2024, 01:47 AM IST

ಸಾರಾಂಶ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತರೀಕೆರೆ ತಾಲೂಕು ಶಾಖೆಯಿಂದ ಗುರುವಾರ, ತರೀಕೆರೆ ತಾಲೂಕು ಕಸಬಾ ಹೋಬಳಿ ಎಚ್.ರಂಗಾಪುರ ಗ್ರಾಮದ ಸ.ನಂ.14ರಲ್ಲಿ ಒಟ್ಟು ಸರ್ಕಾರಿ ಜಮೀನಿನ 57.16 ಎಕರೆಯಲ್ಲಿ 15 ಎಕರೆ ಜಾಗದಲ್ಲಿ ನಿವೇಶನ ರಹಿತರು ಹಾಕಿಕೊಂಡಿದ್ದ ಗುಡಿಸಲು ಕಿತ್ತು, ಸುಟ್ಟು ಹಾಕಿ ಒಕ್ಕಲೆಬ್ಬಿಸಿದ್ದನ್ನು ವಿರೋಧಿಸಿ ಮತ್ತು ಸ.ನಂ.12 ರಲ್ಲಿ ಕೆರೆ ಒತ್ತುವರಿ ತೆರವಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮರ್ಲೆ ಅಣ್ಣಯ್ಯ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಯಿತು

ಕನ್ನಡಪ್ರಭ ವಾರ್ತೆ, ತರೀಕೆರೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತರೀಕೆರೆ ತಾಲೂಕು ಶಾಖೆಯಿಂದ ಗುರುವಾರ, ತರೀಕೆರೆ ತಾಲೂಕು ಕಸಬಾ ಹೋಬಳಿ ಎಚ್.ರಂಗಾಪುರ ಗ್ರಾಮದ ಸ.ನಂ.14ರಲ್ಲಿ ಒಟ್ಟು ಸರ್ಕಾರಿ ಜಮೀನಿನ 57.16 ಎಕರೆಯಲ್ಲಿ 15 ಎಕರೆ ಜಾಗದಲ್ಲಿ ನಿವೇಶನ ರಹಿತರು ಹಾಕಿಕೊಂಡಿದ್ದ ಗುಡಿಸಲು ಕಿತ್ತು, ಸುಟ್ಟು ಹಾಕಿ ಒಕ್ಕಲೆಬ್ಬಿಸಿದ್ದನ್ನು ವಿರೋಧಿಸಿ ಮತ್ತು ಸ.ನಂ.12 ರಲ್ಲಿ ಕೆರೆ ಒತ್ತುವರಿ ತೆರವಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮರ್ಲೆ ಅಣ್ಣಯ್ಯ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಯಿತು.ತಾಲೂಕು ಕಸಬಾ ಹೋಬಳಿ ಎಚ್.ರಂಗಾಪುರ ಗ್ರಾಮದ ಸ.ನಂ.14ರಲ್ಲಿ 57 ಎಕರೆ 16 ಗುಂಟೆ ಸರ್ಕಾರಿ ಜಮೀನಿನಲ್ಲಿ 15 ಎಕರೆ ಜಾಗದಲ್ಲಿ ನಿವೇಶನ ರಹಿತರು ಜೈ ಭೀಮ್ ನಗರ ಎಂದು ಹೆಸರು ನಾಮಕರಣ ಮಾಡಿಕೊಂಡು ಗುಡಿಸಲು ಕಟ್ಟಿ ವಾಸಿಸುತ್ತಿದ್ದು, ಈ ಜಾಗದಲ್ಲಿ ಕೆಲವು ಭೂಗಳ್ಳರು ಭೂಮಿ ಕಬಳಿಸಲು ಸಂಚು ಮಾಡಿ ಬಡವರ ಗುಡಿಸಲುಗಳನ್ನು ಕಿತ್ತು ಮತ್ತು ಸುಟ್ಟು ಹಾಕಿದ್ದು ಅಲ್ಲಿಯ ಬಡವರಿಗೆ ಜೀವಭಯ ಸೃಷ್ಠಿ ಮಾಡಿ ಒಕ್ಕಲೆಬ್ಬಿಸಿದ್ದಾರೆ.

ಎಂ.ಸಿ.ಹಳ್ಳಿ, ಎಚ್.ರಂಗಾಪುರ ಗ್ರಾಮದ ಸರ್ಕಾರಿ ಮಲ್ಲಯ್ಯನ ಕೆರೆ ಒತ್ತುವರಿ ಮಾಡಿದ್ದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಉಸ್ತುವಾರಿ ಕಾರ್ಯದರ್ಶಿಗಳಿಗೆ ತಾಲೂಕು ಸಂಚಾಲಕ ರಾಮಚಂದ್ರ ದಾಖಲೆ ಸಮೇತ ದೂರು ನೀಡಿದ್ದು, ದೂರಿನನ್ವಯ ಕೆರೆ ಒತ್ತುವರಿ ತೆರವುಗೊಳಿಸಲು ಸರ್ಕಾರದಿಂದ ಅದೇಶ ಬಂದಿದ್ದು ತಹಸೀಲ್ದಾರ್‌ ಯಾವುದೇ ಕ್ರಮ ಕೈ ಗೊಂಡಿಲ್ಲ, ಈ ಬಗ್ಗೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಬಂದಪಟ್ಟ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅಹೋರಾತ್ರಿ ಧರಣಿ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷದ ಮರ್ಲೆ ಅಣ್ಣಯ್ಯ ಮಾತನಾಡಿ 57 ಎಕರೆ ಕಂದಾಯ ಭೂಮಿ ಇದೆ, ನಿವೇಶನ ರಹಿತರಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಬೇಕು. ಮಲ್ಲಯ್ಯನ ಕೆರೆ ಒತ್ತುವರಿ ಯನ್ನು ತೆರವುಗೊಳಿಸಬೇಕು ಅಕ್ರಮವಾಗಿ ಗಿಡಗಳನ್ನು ಹಾಕಿದ್ದಾರೆ, ರಸ್ತೆ ಮುಚ್ಚಿದ್ದಾರೆ ಇದು ಅನ್ಯಾಯ, ಗಿಡ ನೆಡುತ್ತಿರುವುದನ್ನು ತಡೆಯಬೇಕು ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ ಸಂಘಟಿತರಾಗಿ ಹೋರಾಟ ಮಾಡೋಣ, ಬಡವರಿಗೆ, ದಲಿತರಿಗೆ, ಹಿಂದುಳಿದವರಿಗೆ ಎಲ್ಲರಿಗೂ ಭೂಮಿ ಸಿಗಬೇಕು, 600 ಜನರಿಗೆ ನಿವೇಶನ ಅಗತ್ಯವಿದೆ, ನಿವೇಶನಗಳನ್ನು ಕೊಡ ಬೇಕು, ನಾನು ಶೋಷಿತರ ವರ್ಗದವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಒತ್ತಾಯಿಸಿದರು.

ತಾಲೂಕು ಸಂಚಾಲಕರಾದ ಹಾದಿಕೆರೆ ರಾಜು, ರಮೇಶ್, ತಾಲೂಕು ಸಂಘಟನಾ ಕಾರ್ಯದರ್ಶಿ ಮಧುಕುಮಾರ್, ಮೌಂಟ್ ಬ್ಯಾಟನ್, ವಿಗಾಸ್, ಪರಶುರಾಮ್, ರಮೇಶ್, ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.