ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಪುರಸಭಾ ವ್ಯಾಪ್ತಿಯ ಬೈಚನಹಳ್ಳಿ ಗ್ರಾಮದ ಸಾರ್ವಜನಿಕರು ಸ್ಮಶಾನ ಮಂಜೂರಾತಿ ಮತ್ತು ಅಕ್ರಮವಾಗಿ ಒತ್ತುವರಿ ಮಾಡಿರುವ ಗೋಮಾಳ ಜಾಗವನ್ನು ತೆರವುಗೊಳಿಸುವಂತೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ತಹಸೀಲ್ದಾರ್ ಭರವಸೆ ಮೇರೆಗೆ ಹಿಂಪಡೆದುಕೊಂಡಿದ್ದಾರೆ.ಬೈಚನಹಳ್ಳಿ ವ್ಯಾಪ್ತಿಯಲ್ಲಿ ಸ್ಮಶಾನ ವಿವಾದ ಬಗೆಹರಿಯದೆ ಅಲ್ಲಿನ ಗ್ರಾಮಸ್ಥರು ಗುರುವಾರದಿಂದ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದರು. ಶುಕ್ರವಾರ ಪ್ರತಿಭಟನಾಕಾರರು ಕುಶಾಲನಗರ ಪುರಸಭೆ ಕಚೇರಿಗೆ ಮೆರವಣಿಗೆಯಲ್ಲಿ ಬಂದು ತಕ್ಷಣ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಪುರಸಭಾ ಮುಖ್ಯ ಅಧಿಕಾರಿ ಗಿರೀಶ್, ಪ್ರತಿಭಟನಾಕಾರರಿಗೆ ಸ್ಮಶಾನ ಜಾಗ ಮಂಜೂರು ಬಗ್ಗೆ ಮಾಹಿತಿ ನೀಡಿ ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಯೋಜನಾ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಸ್ಮಶಾನ ವಿಷಯಕ್ಕೆ ಸಂಬಂಧಿಸಿದಂತೆ ತಕ್ಷಣ ಸಂಬಂಧಿಸಿದ ಜಾಗದ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.ಸಂಬಂಧಿಸಿದ ವಿಷಯ ಕಂದಾಯ ಇಲಾಖೆಗೆ ಸೇರಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮೀ ಅವರು ಪ್ರತಿಭಟನಾಕಾರರನ್ನು ಭೇಟಿ ಮಾಡಿ ನ್ಯಾಯ ಒದಗಿಸುವ ಭರವಸೆ ವ್ಯಕ್ತಪಡಿಸಿದರು.ನಂತರ ಪುರಸಭೆಗೆ ಭೇಟಿ ನೀಡಿದ ತಾಲೂಕು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ, ಪ್ರತಿಭಟನಾಕಾರದ ಮನವಿ ಸ್ವೀಕರಿಸಿ ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಕ್ಷೇತ್ರ ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.ಬೈಚನಹಳ್ಳಿ ಗೆಳೆಯರ ಬಳಗ ನೇತೃತ್ವದಲ್ಲಿ ನಡೆದ ಗ್ರಾಮಸ್ಥರ ಪ್ರತಿಭಟನೆಯಲ್ಲಿ ಪುರಸಭೆಯ ಸದಸ್ಯ ಬಿ.ಎಲ್. ಜಗದೀಶ್, ಸ್ಥಳೀಯ ಪ್ರಮುಖರಾದ ಕೆ.ಎನ್. ಅಶೋಕ್, ಡಿ.ಶ್ರೀಕಾಂತ್ ಮತ್ತು ಗ್ರಾಮದ ಪ್ರಮುಖರು ಗೆಳೆಯರ ಬಳಗದ ಪದಾಧಿಕಾರಿಗಳು ಇದ್ದರು.