ಸಾರಾಂಶ
ಚನ್ನಪಟ್ಟಣ: ವಿಲೀನದ ಹೆಸರಿನಲ್ಲಿ ತಾಲೂಕಿನ ಸಂತೆ ಮೊಗೆನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುವುದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳಡಿ ಸುತ್ತಲಿನ ಶಾಲೆಗಳ ವಿಲೀನದೊಂದಿಗೆ ೨೫,೦೦೦ಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ಕಂಟಕ ತಂದೊಡ್ಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಒ ರಾಜ್ಯ ಖಜಾಂಚಿ ಶುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ, ೮೦೦ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳು ಎಂದು ಗುರುತಿಸಲಾಗಿದೆ. ಅಂದರೆ ಕರ್ನಾಟಕ ಪಬ್ಲಿಕ್ ಶಾಲೆಯ ಸುತ್ತಮುತ್ತಲಿನ ೧ರಿಂದ ೫ ಕಿ.ಮೀ ವ್ಯಾಪ್ತಿಯ, ೫೦ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳುವ ಹೆಸರಿನಲ್ಲಿ ಆ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂದು ಆರೋಪಿಸಿದರು.
ಈಗ ನಿರ್ಮಿಸಿರುವ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಕೆಪಿಎಸ್ ಮಾಗ್ನೆಟ್ ಶಾಲೆಗೆ, ಹೊಂಗನೂರಿನ ಆರು ಕಿಮೀ ವ್ಯಾಪ್ತಿಯ ೭ ಪ್ರಾಥಮಿಕ ಶಾಲೆಗಳನ್ನು ವಿದ್ಯಾರ್ಥಿ, ಉಪಾಧ್ಯಾಯರು ಮತ್ತು ಪರಿಕರಗಳ ಸಮೇತ ವಿಲೀನಗೊಳಿಸಲು ಸರ್ಕಾರವು ಆದೇಶ ಹೊರಡಿಸಿದೆ. ಇದರಲ್ಲಿ ೧೧೦ಕ್ಕೂ ಅಧಿಕ ಸಂಖ್ಯೆಯ ದಾಖಲಾತಿ ಹೊಂದಿರುವ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಖಂಡನೀಯ ಎಂದರು.ಕೆಪಿಎಸ್ ಶಾಲೆಗಳನ್ನು ತೆರೆಯುವುದಕ್ಕೆ ನಮ್ಮ ವಿರೋಧವಿಲ್ಲ ಆದರೆ ಗ್ರಾಮ ಪಂಚಾಯಿತಿಗೆ ಮಾತ್ರ ಒಂದು ಶಾಲೆಗಳನ್ನು ತೆರೆಯುವುದನ್ನು ನಾವು ವಿರೋಧಿಸುತ್ತೇವೆ. ಯಾಕೆಂದರೆ, ಕರ್ನಾಟಕದಲ್ಲಿ ಒಟ್ಟು ೪೯,೬೦೦ ಸರ್ಕಾರಿ ಶಾಲೆಗಳಿದ್ದು, ಗ್ರಾಮ ಪಂಚಾಯಿತಿಗಳು ೫,೯೦೦ ಇವೆ. ಹೀಗಾದಲ್ಲಿ ೫,೯೦೦ ಶಾಲೆಗಳು ಮಾತ್ರ ಉಳಿಯುತ್ತದೆ. ಸರ್ಕಾರವು ಪ್ರತಿ ಹಳ್ಳಿಗೆ ಬಸ್ ಸೌಕರ್ಯ ಕಲ್ಪಿಸುವುದಾಗಿ ಹೇಳುತ್ತಿದೆ. ಆದರೆ ಈಗಾಗಲೇ ಎಷ್ಟೋ ಹಳ್ಳಿಗಳಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಪರಿಸ್ಥಿತಿ ಇದೆ. ಹೀಗಿರುವಾಗ, ೬-೭ ಕಿಮೀ ವಿದ್ಯಾರ್ಥಿಗಳು ಕ್ರಮಿಸುವುದು ಹೇಗೆ. ಈ ಯೋಜನೆಗೆ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ ಈಗಾಗಲೇ ೨೫೦೦ ಕೋಟಿ ಸಾಲ ಪಡೆದಿರುವ ಸರ್ಕಾರವು ಕಾರ್ಪೊರೇಟ್ ಹಿತಾಸಕ್ತಿ ಕಾಪಾಡಲು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ ಎಂದು ಆರೋಪಿಸಿದರು.
ಸರ್ಕಾರವು ತಳಮಟ್ಟದ ಶಾಲೆಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದು, ಇದನ್ನು ವಿರೋಧಿಸಿ ರಾಜ್ಯದಲ್ಲಿ ಬಲಿಷ್ಠ ಹೋರಾಟ ಕಟ್ಟುವುದು ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಣ-ಪ್ರೇಮಿ ಜನತೆಯ ಜವಾಬ್ದಾರಿ ಎಂದರು.ಸಂಘಟನೆಯ ಜಿಲ್ಲಾ ಸಂಚಾಲಕ ರೋಹಿತ್, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪೊಟೋ೨೦ಸಿಪಿಟಿ೧:ಚನ್ನಪಟ್ಟಣ ತಾಲೂಕಿನ ಸಂತೆ ಮೊಗೆನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುವುದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))