ಕೇಂದ್ರ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಯೋಜನೆ ಕಡಿತ ಖಂಡಿಸಿ ಪ್ರತಿಭಟನೆ

| Published : Jul 30 2024, 12:32 AM IST

ಕೇಂದ್ರ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಯೋಜನೆ ಕಡಿತ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ನಗರದ ಡಿಸಿ ಕಚೇರಿ ಮುಂದೆ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ತಾಲೂಕು ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಪ್ರಧಾನ ಮಂತ್ರಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದಿಂದ ಇತ್ತೀಚೆಗೆ ಮಂಡನೆಯಾದ 3.0 ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಇಲಾಖೆ ಯೋಜನೆ ಕಡಿತಗೊಳಿಸಿರುವ ಕ್ರಮ ಖಂಡಿಸಿ ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದ ತಾಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಜಮಾಯಿಸಿದ ಸದಸ್ಯರು ಕೇಂದ್ರ ಮಂಡಿಸಿರುವ ದ್ವೇಷ ಪೂರಿತ ಬಜೆಟ್ ವಿರುದ್ಧ ಜಿಲ್ಲಾಡಳಿತ ಮುಖಾಂತರ ರಾಷ್ಟ್ರಪತಿಗೆ ಮನವಿ ರವಾನಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು, ಅಲ್ಪಸಂಖ್ಯಾತರ ಬಗೆಗಿನ ಅಸಹಿಷ್ಣುತೆ ಮತ್ತು ದ್ವೇಷದ ಮನಸ್ಥಿತಿ ಮುಂದುವರಿಕೆಯೇ ಮೋದಿ ಸರ್ಕಾರದ ಬಜೆಟ್‌ನಲ್ಲಿ ಕಾಣುತ್ತಿದೆ. ಒಂದೆಡೆ, ಅಲ್ಪಸಂಖ್ಯಾತ ಇಲಾಖೆಗೆ ಬಜೆಟ್ ಪಾಲು ಹೆಚ್ಚಿದಂತೆ ಕಂಡರೂ, ಇನ್ನೊಂದೆಡೆ ಸದ್ದಿಲ್ಲದೆ ಯೋಜನೆಗಳು ಕಡಿತಗೊಳಿಸಲಾಗಿದ ಎಂದು ಆರೋಪಿಸಿದರು.

ಸಚಿವಾಲಯದ ಒಟ್ಟು ಬಜೆಟ್ ಶೇ.2.7ರಷ್ಟು ಏರಿಕೆಯಾಗಿರುವುದೇನೊ ನಿಜ. ಆದರೆ, ಹೆಚ್ಚಿನ ಅಲ್ಪಸಂಖ್ಯಾತ ಯೋಜನೆಗಳು ಕಡಿತಗೊಂಡಿದೆ. ಪ್ರಧಾನ ಮಂತ್ರಿ ಜನ ವಿಕಾಸ ಕಾರ್ಯಕ್ರಮ ಯೋಜನೆಗೆ ₹300 ಕೋಟಿ ಹೆಚ್ಚಿಸಲಾಗಿದೆ. ಇದು ದೇಶಾದ್ಯಂತ 1,300 ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಕುಂಠಿತ ಅಭಿವೃದ್ಧಿ ಸರಿಪಡಿಸಲು ಬಳಕೆಯಾಗುವ ಯೋಜನೆ. ಇದರ ಮೂಲಕ ಅಲ್ಪಸಂಖ್ಯಾತರ ಖಾತೆ ಬಜೆಟ್ ಹೆಚ್ಚಿಸಿದಂತೆ ತೋರಿಸಿ ಅಲ್ಪಸಂಖ್ಯಾತರಿಗೆ ನೇರವಾಗಿ ನೆರವಾಗುವ ಯೋಜನೆಗಳಿಗೆ ಕತ್ತರಿ ಹಾಕಲಾಗಿದೆ ಎಂದು ಆಪಾದಿಸಿದರು,

ಇತ್ತೀಚಿನ ವರ್ಷಗಳಲ್ಲಿ ಅಲ್ಪಸಂಖ್ಯಾತ ವಿರೋಧಿ ಬಜೆಟ್‌ನ್ನು ನಾವು ತಿರಸ್ಕರಿಸುವುದರೊಂದಿಗೆ ಅಲ್ಪಸಂಖ್ಯಾತರ ಪರವಾಗಿ ಅಭಿವೃದ್ಧಿಗಾಗಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನಿಗದಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಹೋರಾಟದಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ಆರ್.ಹುಚ್ಚರೆಡ್ಡಿ, ಜಿಲ್ಲಾ ಸಮಿತಿ ಸದಸ್ಯರು ಅಜೀಜ್ ಜಾಗೀರದಾರ್, ಮುಖಂಡರಾದ ಸೈಯದ್ ಅಬ್ಬಾಸ್ ಅಲಿ, ಮಾರೆಪ್ಪ ಹರವಿ, ಆಂಜನೇಯ, ರಂಗಾರೆಡ್ಡಿ, ನಿರಂಜನ ಕುಮಾರ್, ಯಲ್ಲಪ್ಪ ಪ್ರತಿಭಟನೆಯಲ್ಲಿದ್ದರು.