ವಸತಿ ಯೋಜನೆ ಅನುಷ್ಠಾನದಲ್ಲಿ ವಿಳಂಬ ವಿರೋಧಿಸಿ ಪ್ರತಿಭಟನೆ

| Published : Jul 01 2025, 12:47 AM IST

ಸಾರಾಂಶ

ರಾಜ್ಯ ಸರ್ಕಾರದಿಂದ ಕಳೆದ ಎರಡು ವರ್ಷಗಳಿಂದ ಯಾವುದೇ ಹೊಸ ಮನೆ ಮಂಜೂರು ಆಗಿಲ್ಲ.

ಸಿದ್ದಾಪುರ: ರಾಜ್ಯ ಸರ್ಕಾರದಿಂದ ಕಳೆದ ಎರಡು ವರ್ಷಗಳಿಂದ ಯಾವುದೇ ಹೊಸ ಮನೆ ಮಂಜೂರು ಆಗಿಲ್ಲ. ಈಗಾಗಲೇ ಇದ್ದ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬ ನೀತಿ ಹಾಗೂ ಭ್ರಷ್ಟಾಚಾರ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ೨೨೯ ಗ್ರಾಪಂಗಳಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದರು.ಅವರು ತಾರೆಹಳ್ಳಿ- ಕಾನಸೂರು ಗ್ರಾಪಂ ಬಳಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರದ ಆಡಳಿತ ಹೇಗಿದೆ ಎಂಬುದನ್ನು ಅವರದೇ ಪಕ್ಷದ ಶಾಸಕ ಬಿ.ಆರ್. ಪಾಟೀಲ್ ಹೇಳಿದ್ದಾರೆ. ಸರ್ಕಾರದ ಆಗು-ಹೋಗು, ಹಣಕಾಸು ಪರಿಸ್ಥಿತಿ ಚೆನ್ನಾಗಿ ಗೊತ್ತಿರುವ ಗೃಹ ಸಚಿವ ಪರಮೇಶ್ವರ್ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಳಿ ದುಡ್ಡಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದೆ. ಗ್ಯಾರಂಟಿ ಸರ್ಕಾರ ಅಂತ ಕರೆದುಕೊಳ್ಳುತ್ತಾರೆ, ಆದರೆ ಜನರಿಗೆ ಯಾವುದೇ ಯೋಜನೆಗಳ ಗ್ಯಾರಂಟಿ ಇಲ್ಲ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಅಂದರೆ ಅದು ಭ್ರಷ್ಟಾಚಾರದ, ಲೂಟಿ ಸರ್ಕಾರ ಎಂದು ಆರೋಪಿಸಿದರು. ಗ್ಯಾರಂಟಿ ಸರ್ಕಾರ ಹೋಗಿ ಎಟಿಎಂ ಸರ್ಕಾರ ಆಗಿದೆ. ಮನೆ ಕರವನ್ನು ಹಿಂದೆ ಆಯಾ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳೇ ನಿಗದಿ ಮಾಡುತ್ತಿದ್ದರು. ಈಗ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ತಾನೇ ಕರ ನಿರ್ಧಾರ ಮಾಡುತ್ತಿದೆ. ಇದು ಜನರ ಬದುಕಿನ ಮೇಲೆ ಬರೆ ಎಳೆಯುವ ಕ್ರಮ. ಪ್ರಭುತ್ವ ಜನರ ಬದುಕನ್ನು ಹಸನು ಮಾಡುವ ಹಾಗಿರಬೇಕು. ಆದರೆ ರಾಜ್ಯ ಸರ್ಕಾರ ಜನರ ಬದುಕನ್ನು ದುಸ್ತರ ಮಾಡಿದೆ. ಯಾವುದೇ ಅಭಿವೃದ್ಧಿ ಇಲ್ಲದೇ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಗುರುಪ್ರಸಾದ ಹೆಗಡೆ ಹರ್ತೆಬೈಲ್ ಆರೋಪಿಸಿದರು.

ಹೋರಾಟದ ಬೇಡಿಕೆ ಪತ್ರವನ್ನು ಶಕ್ತಿಕೇಂದ್ರ ಪ್ರಮುಖ ಗುರುನಾಥ ಗೋವಿಂದ ಹೆಗಡೆ ಓದಿದರು. ಪಿಡಿಒ ಮುಖಾಂತರ ರಾಜ್ಯದ ಮುಖ್ಯಮಂತ್ರಿಗೆ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಆಗ್ರಹಿಸಿ ಅಹವಾಲು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಶಶಿಪ್ರಭಾ ಹೆಗಡೆ, ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ತಾಪಂ ಮಾಜಿ ಸದಸ್ಯ ಮಾಬ್ಲೇಶ್ವರ ಹೆಗಡೆ, ಗ್ರಾಪಂ ಸದಸ್ಯರಾದ ವೀರಭದ್ರ, ಮಾಲಿನಿ ನಾಯ್ಕ, ಪ್ರಮುಖರಾದ ಬಲರಾಮ ನಾಮಧಾರಿ, ಗಣೇಶ ನಾಯ್ಕ, ಲೋಕೇಶ ಭಟ್, ನರಸಿಂಹ ಹೆಗಡೆ, ನಾಗರಾಜ ನಾಯ್ಕ ಉಪಸ್ಥಿತರಿದ್ದರು.