ಹಾಸ್ಟೆಲ್ ಪ್ರವೇಶ ಆಯ್ಕೆಪಟ್ಟಿ ಬಿಡುಗಡೆ ವಿಳಂಬ ಖಂಡಿಸಿ ಪ್ರತಿಭಟನೆ

| Published : Jul 15 2025, 01:00 AM IST

ಹಾಸ್ಟೆಲ್ ಪ್ರವೇಶ ಆಯ್ಕೆಪಟ್ಟಿ ಬಿಡುಗಡೆ ವಿಳಂಬ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಎಲ್ಲ ತಾಲೂಕಿನ ಆಯ್ಕೆ ಸಮಿತಿಯ ಅಧ್ಯಕ್ಷರು ಶಾಸಕರು ಆಗಿರುವುದರಿಂದ ವಿದ್ಯಾರ್ಥಿಗಳ ಪ್ರವೇಶ ಆಯ್ಕೆಪಟ್ಟಿ ಬಿಡುಗಡೆಗೆ ವಿಳಂಬ ಮಾಡಬಾರದು ಎಂದು ಆಗ್ರಹಿಸಲಾಯಿತು.

ಹಾವೇರಿ: ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಹಾಗೂ 2025- 26ನೇ ಸಾಲಿನ ಹಾಸ್ಟೆಲ್ ಪ್ರವೇಶ ಆಯ್ಕೆಪಟ್ಟಿ ಬಿಡುಗಡೆಗೆ ವಿಳಂಬ ನೀತಿ ಖಂಡಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ಸುನೀಲ್ ನಾಗವತ್ ಮಾತನಾಡಿ, ರಾಜ್ಯದಲ್ಲಿ ಶಾಲಾ- ಕಾಲೇಜು ಆರಂಭವಾಗಿ ಒಂದು ತಿಂಗಳು ಕಳೆದರೂ ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ್ದ ವಿದ್ಯಾರ್ಥಿಗಳು ಗ್ರಾಮಗಳಿಂದ ಕಾಲೇಜುಗಳಿಗೆ ದಿನನಿತ್ಯವೂ ಹಣ ಕೊಟ್ಟು ಬರುತ್ತಿದ್ದಾರೆ.

ಒಂದೆಡೆ ಅನೇಕ ಗ್ರಾಮಗಳಿಗೆ ಬಸ್ ಸೌಲಭ್ಯವೇ ಇಲ್ಲ. ಜಿಲ್ಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ್ದು, ಆಯ್ಕೆ ಪಟ್ಟಿ ಪ್ರಕಟಿಸುತ್ತಾರೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನೊಂದೆಡೆ ದೂರದ ಊರಿನಿಂದ ಬರುವ ವಿದ್ಯಾರ್ಥಿಗಳು ನಿತ್ಯ ನೂರಾರು ರುಪಾಯಿ ಖರ್ಚು ಮಾಡುವಂತಾಗಿದೆ ಎಂದು ದೂರಿದರು. ಜಿಲ್ಲೆಯ ಎಲ್ಲ ತಾಲೂಕಿನ ಆಯ್ಕೆ ಸಮಿತಿಯ ಅಧ್ಯಕ್ಷರು ಶಾಸಕರು ಆಗಿರುವುದರಿಂದ ವಿದ್ಯಾರ್ಥಿಗಳ ಪ್ರವೇಶ ಆಯ್ಕೆಪಟ್ಟಿ ಬಿಡುಗಡೆಗೆ ವಿಳಂಬ ಮಾಡಬಾರದು, ಮುತುವರ್ಜಿಯಿಂದ ಕೂಡಲೇ ಆಯ್ಕೆಪಟ್ಟಿ ಬಿಡುಗಡೆ ಮಾಡಿಸಬೇಕು ಹಾಗೂ ಎಲ್ಲ ಹಾಸ್ಟೆಲ್‌ಗಳನ್ನು ಕೂಡಲೇ ಯೋಗ್ಯವಾದ ಅಗತ್ಯ ಸೌಲಭ್ಯಗಳನ್ನು ಒಳಗೊಂಡ ಕಟ್ಟಡದಲ್ಲಿ ಪ್ರಾರಂಭಿಸಿ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಹಾಸ್ಟೆಲ್‌ಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಲ್ಲ ತಾಲೂಕು ವಿಸ್ತರಣಾಧಿಕಾರಿಗಳು ಎಚ್ಚೆತ್ತು ಕೂಡಲೇ ಶಾಸಕರ ಗಮನಕ್ಕೆ ತಂದು ಹಾಸ್ಟೆಲ್ ವಿದ್ಯಾರ್ಥಿಗಳ ಪ್ರವೇಶ ಆಯ್ಕೆಪಟ್ಟಿ ಬಿಡುಗಡೆ ಮಾಡಬೇಕು. ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು. ಮೆನು ಚಾರ್ಟ್ ಪ್ರಕಾರ ಉತ್ತಮ ಗುಣಮಟ್ಟದ ಆಹಾರವನ್ನು ಸಮಯಕ್ಕೆ ಸರಿಯಾಗಿ ಒದಗಿಸಬೇಕು. ಅಗತ್ಯ ಮೂಲ ಸೌಕರ್ಯಗಳನ್ನು ನೀಡಬೇಕೆಂದು ಹಾಗೂ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ ₹3500ಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾಧಿಕಾರಿ ಶಾಂತಪ್ಪ ದೊಡ್ಡಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಫಕ್ಕಿರೇಶ ಮ್ಯಾಗಳಮನಿ, ಸುನೀಲ್ ಕುಮಾರ್ ಎಲ್., ಸಂಜೀವ್ ತಿಳವಳ್ಳಿ, ಪ್ರಮೋದ್ ಎಚ್., ನಾಗರಾಜ ಎಂ.ಎಚ್., ಜ್ಯೋತಿ ಎಸ್.ಕೆ., ವಿದ್ಯಾ ಎಚ್.ಆರ್., ಸೀಮಾ ಬಾನು, ಶ್ರೀಕಾಂತ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.