ಸರ್ಕಾರಿ ಆಸ್ತಿ ಅತಿಕ್ರಮಣ ವಿರೋಧಿಸಿ ಹಾನಗಲ್ಲನಲ್ಲಿ ಪ್ರತಿಭಟನೆ

| Published : Aug 03 2024, 12:39 AM IST

ಸಾರಾಂಶ

ಹಾನಗಲ್ಲ ಪುರಸಭೆ ಕಾರ್ಯಾಲಯದ ಎದುರಿಗೆ ಇರುವ ಹಳೆಯ ಬಸ್‌ನಿಲ್ದಾಣದ ಸರಕಾರಿ ಜಾಗೆ ಅತಿಕ್ರಮಣ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣ ವಿರೋಧಿಸಿ ಹಾನಗಲ್ಲದಲ್ಲಿ ಗುರುವಾರ ಹಿಂದು ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಾನಗಲ್ಲ: ಪುರಸಭೆ ಕಾರ್ಯಾಲಯದ ಎದುರಿಗೆ ಇರುವ ಹಳೆಯ ಬಸ್‌ನಿಲ್ದಾಣದ ಸರಕಾರಿ ಜಾಗೆ ಅತಿಕ್ರಮಣ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣ ವಿರೋಧಿಸಿ ಹಾನಗಲ್ಲದಲ್ಲಿ ಗುರುವಾರ ಹಿಂದು ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಲ್ಲಿಯ ಕುಮಾರೇಶ್ವರ ಮಠದಿಂದ ಪುರಸಭೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಹಿಂದು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್‌ ಮಾತನಾಡಿ, ಉಚ್ಚ ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿ ಸರಕಾರಿ ಆಸ್ತಿಯನ್ನು ಪರಭಾರೆ ಮಾಡುವ ಹುನ್ನಾರ ಇದು ಕಾನೂನು ಬಾಹೀರ, ಅಧಿಕಾರಿಗಳ ಲೋಪದಿಂದಾಗಿ ಸರಕಾರಿ ಆಸ್ತಿಗಳು ಕಂಡವರ ಪಾಲಾಗುತ್ತಿರುವುದನ್ನು ಸಹಿಸುವುದಿಲ್ಲ. ಪುರಸಭೆ ಸರಕಾರಿ ಆಸ್ತಿ ಅತಿಕ್ರಮಣಕ್ಕೆ ಸಹಕಾರ ನೀಡುತ್ತಿದೆ ಎಂದು ಕಿಡಿಕಾರಿದರು.

ಹಾನಗಲ್ಲ ಪುರಸಭೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುತ್ತಿದೆ. ಪುರಸಭೆ ಆಡಳಿತಾಧಿಕಾರಿಗಳು ಹಾಗೂ ಮುಖ್ಯಾಧಿಕಾರಿಗಳಿಗೆ ಇದನ್ನು ತಡೆಯಲು ನೀಡಿದ ಮನವಿಗಳು ವಿಫಲವಾಗಿವೆ. ಅತಿಕ್ರಮಣ ತಡೆಯಲು ಪುರಸಭೆ ಕಿಂಚಿತ್ತು ಮುಂದಾಗುತ್ತಿಲ್ಲ. ಇದು ಹಾನಗಲ್ಲಿನಲ್ಲಿನ ಸರಕಾರಿ ಆಸ್ತಿಗಳನ್ನು ಪರಭಾರೆ ಮಾಡುತ್ತಿರುವ ಹುನ್ನಾರ ಎಂದು ಪ್ರತಿಭಟನೆ ಮಾತುಗಳನ್ನಾಡಿದರು.ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ ಮಾತನಾಡಿ, ಸಮಸ್ಯೆಯನ್ನು ಹುಟ್ಟು ಹಾಕಿದ ಹಾನಗಲ್ಲ ಪುರಸಭೆಯೇ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು. ತಪ್ಪಿದಲ್ಲಿ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೆ ಹೊಣೆಗಾರರು. ಈ ಪ್ರಕರಣವನ್ನು ಹಗುರಾಗಿ ಪರಿಗಣಿಸಬೇಡಿ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದರೆ ಸಹಿಸುವುದಿಲ್ಲ. ಸರಕಾರಿ ಆಸ್ತಿ ಉಳಿಸುವ ಈ ಪ್ರತಿಭಟನೆಗೆ ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಅದರ ಪರಿಣಾಮ ಇಲ್ಲಿ ಧಾರ್ಮಿಕ ಭಾವನೆಗಳನ್ನು ಕೆದಕಿದಂತಾಗುತ್ತದೆ. ತಪ್ಪು ಮಾಹಿತಿ ನೀಡಿ ಅಧಿಕಾರಿಗಳು ಹಾನಗಲ್ಲಿನ ಶಾಂತಿ ವಾತಾವರಣವನ್ನು ಕದಡಬೇಡಿ ಎಂದು ಎಚ್ಚರಿಸಿದರು.ಸಾಮಾಜಿಕ ಹೋರಾಟಗಾರ ಪ್ರಶಾಂತ ಮುಚ್ಚಂಡಿ ಮಾತನಾಡಿ, ಹಾನಗಲ್ಲ ಹಳೆ ಬಸ್‌ನಿಲ್ದಾಣದ ಜಾಗೆಯ ಬಗೆಗೆ ಏನೂ ಗೊಂದಲವಿಲ್ಲ. ಈ ಗೊಂದಲ ಅಧಿಕಾರಿಗಳ ಸೃಷ್ಟಿಯಾಗಿದೆ. ಉಚ್ಚ ನ್ಯಾಯಾಲಯದ ತೀರ್ಪು ಹಾಗೂ ಪುರಸಭೆ ಮೂಲಕ ಈ ಜಾಗೆಯ ಹಂಚಿಕೆಯ ಒಪ್ಪಂದವನ್ನು ಸರಿಯಾಗಿ ಒಪ್ಪಿ ನಡೆಯುವುದು ನ್ಯಾಯಯುತ. ಆದರೆ ಇದನ್ನು ಮೀರಿ ಅಧಿಕಾರಿಗಳು ಅತಿಕ್ರಮಣ ಕಟ್ಟಡಕ್ಕೆ ಅನುಕೂಲಕರವಾಗಿ ನಡೆದುಕೊಳ್ಳುತ್ತಿರುವುದು ಸಮಸ್ಯೆ ಹುಟ್ಟು ಹಾಕಿದಂತಾಗಿದೆ. ಇಲ್ಲಿ ಸರಕಾರಿ ಆಸ್ತಿ ಉಳಿಸುವುದು ಹಾಗೂ ಧಾರ್ಮಿಕ ಭಾವನೆಗಳನ್ನು ಕೆದಕದಂತೆ ನೋಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ಎಚ್ಚರಿಕೆಯನ್ನಿಟ್ಟುಕೊಂಡು ಅಧಿಕಾರಿಗಳು ಕ್ರಮ ಜರುಗಿಸಬೇಕು. ತಪ್ಪು ಸಂದೇಶ ನೀಡಬೇಡಿ. ಭಾವನಾತ್ಮಕ ವಿಷಯಗಳನ್ನು ಸಂಘರ್ಷಕ್ಕೆ ಹಚ್ಚಬೇಡಿ. ಇದು ಅಧಿಕಾರಿಗಳಿಗೆ ನೀಡುವ ಮಹತ್ವದ ಎಚ್ಚರಿಕೆ ಎಂದರು.ಮುಂಚಿತವಾಗಿಯೇ ಪ್ರತಿಭಟನೆಯ ಬಗ್ಗೆ ಪ್ರತಿಭಟನಾಕಾರರು ಮಾಹಿತಿ ನೀಡಿದ್ದರಿಂದ ನೀಡಿದ್ದರಿಂದ ಅಂಶುಕುಮಾರ, ಎಎಸ್‌ಪಿ ಸಿ.ಗೋಪಾಲ, ಡಿಎಸ್‌ಪಿ ಎನ್.ಮಂಜುನಾಥ, ಸಿಪಿಐ ಆರ್.ವಿರೇಶ, ಪಿಎಸ್‌ಐ ಸಂಪತ್ ಆನಿಕಿವಿ ಪೊಲೀಸ ಭದ್ರತೆಯೊಂದಿಗೆ ಬೀಡು ಬಿಟ್ಟಿದ್ದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಸವಣೂರು ಉಪವಿಭಾಗಾಧಿಕಾರಿ ಮಹಮ್ಮದ ಖೈಜರ್, ತಹಸೀಲ್ದಾರ ಎಸ್.ರೇಣುಕಮ್ಮ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಈ ಸಂದರ್ಭದಲ್ಲಿದ್ದು, ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಅಲ್ಲದೇ ಪುರಸಭೆ ಕಾರ್ಯಾಲಯದಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆಸಿದರು. ಆದರೆ ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡದೆ ಮೇಲಾಧಿಕಾರಿಗಳಿಗೆ ವಿಷಯ ಪ್ರಸ್ತಾಪಿಸಿ ಸೂಕ್ತ ಕ್ರಮಕ್ಕೆ ಮುಂದಾಗುವರು ಎಂದು ತಿಳಿದಿದೆ.ಪ್ರತಿಭಟನೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರುಗಳಾದ ನಾಗಪ್ಪ ಸವದತ್ತಿ, ಅನಂತವಿಕಾಸ ನಿಂಗೋಜಿ, ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ರವಿಚಂದ್ರ ಪುರೋಹಿತ, ಪ್ರವೀಣ ಸುಲಾಖೆ, ಬಸವರಾಜ ಹಾದಿಮನಿ, ರಾಮು ಯಳ್ಳೂರ, ಎಚ್.ಪ್ರವೀಣಕುಮಾರ, ಚಂದ್ರು ಉಗ್ರಣ್ಣನವರ, ಅಣ್ಣಪ್ಪ ಚಾಕಾಪೂರ, ವಿನಾಯಕ ಕುರುಬರ, ಬಸವರಾಜ ಮಟ್ಟಿಮನಿ, ರವೀಂದ್ರ ದೇಶಪಾಂಡೆ, ಎಂ.ಕೆ. ಪಾರಗಾಂವಕರ, ಜಗದೀಶ ಸಿಂಧೂರ, ಅಜಯ ರೂಗಿಶೆಟ್ಟರ, ಕೃಷ್ಣ ಪೂಜಾರ, ಸಂಜು ಬೇದ್ರೆ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.ಬಂದ್ : ಪ್ರತಿಭಟನೆಗೆ ಬೆಂಬಲಿಸಿ ಹಿಂದೂ ಪರ ಸಂಘಟನೆಗಳ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು.