ಸಾರಾಂಶ
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಅಡುಗೆ ಮಾಡಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಕಡೂರುಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳಿಗೆ ಸರ್ಕಾರಿ ಸವಲತ್ತು ಸಿಗದಂತೆ ತಾಲೂಕು ಕಚೇರಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಪ.ಜಾ.,ಪ.ಪಂ.ದ ಅಲೆಮಾರಿ-ಅರೇ ಅಲೆಮಾರಿ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಸೋಮವಾರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಂಘಟನೆಗಳ ಅಭಿವೃದ್ಧಿ ಸಂಘದಿಂದ ಸೌಲಭ್ಯಗಳನ್ನು ದೊರಕಿಸಿ ಕೊಡುವಂತೆ ಕಚೇರಿ ಆವರಣದಲ್ಲಿ ಅಡುಗೆ ಮಾಡಿ ಪ್ರತಿಭಟಿಸಲಾಯಿತು.ಪ.ಜಾ.,ಪ.ಪಂ.ದ ಅಲೆಮಾರಿ-ಅರೇ ಅಲೆಮಾರಿ ಸಂಘಟನೆ ಮತ್ತು ಹಂದಿ ಸಾಕಾಣಿಕೆ ಸಂಘದ ಅಧ್ಯಕ್ಷ ಟಿ. ಮೂರ್ತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿಗಳ ಸಮುದಾಯಕ್ಕೆ ಅನೇಕ ಸವಲತ್ತು ನೀಡುತ್ತಿವೆ. ಆದರೆ ತಾಲೂಕು ಆಡಳಿತದ ಅಧಿಕಾರಿಗಳು ಆದೇಶಗಳ ಕಡತಗಳನ್ನು ಮರೆಮಾಚಿ ಸೌಲಭ್ಯ ಸಿಗದಂತೆ ವಂಚಿಸುತ್ತಿದ್ದಾರೆ. ಪಟ್ಟಣದ ಕುವೆಂಪು ನಗರ ಬಡಾವಣೆಯಲ್ಲಿ ಕಳೆದ 30 ವರ್ಷಗಳ ಹಿಂದೆ 63 ಅಲೆಮಾರಿಗಳ ಮನೆಗಳಲ್ಲಿ ಕುಟುಂಬ ವಾಸಿಸುವ ಮೂಲಕ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಇಂದಿಗೂ ಮನೆಗೆ ಹಕ್ಕುಪತ್ರಗಳಿಲ್ಲ. ಸ್ವಂತ ಮನೆಯಿಲ್ಲ. ಅಲೆಮಾರಿಗಳ ರೀತಿ ಜೀವನ ನಡೆಸುತ್ತಿದ್ದಾರೆ. ಕೆಲವರಿಗೆ ಪಡಿತರ ಚೀಟಿ ಇಲ್ಲ. ಜೊತೆಗೆ ಜಾತಿ ಪ್ರಮಾಣ ಪತ್ರವೂ ದೊರಕದಿರುವುದು ವಿಪರ್ಯಾಸ. ಈ ಬಗ್ಗೆ ಅಧಿಕಾರಿಗಳ ಬಳಿ ಚರ್ಚಿಸಿದರೆ ಯಾವುದೇ ಸಮರ್ಪಕ ಉತ್ತರ ಸಿಗದೆ ಸಮುದಾಯವನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ ಎಂದು ಆರೋಪಿಸಿದರು.ಪಟ್ಟಣದ ಪುರಸಭೆಯಿಂದ ಆಶ್ರಯ ಯೋಜನೆಯಡಿ ಮಲ್ಲೇಶ್ವರ ಗ್ರಾಮದ ವೀರಭದ್ರಪ್ಪ ಬಡಾವಣೆಯಲ್ಲಿ ಹಕ್ಕುಪತ್ರ ನೀಡಿದ್ದು, ಆದರೆ ಈ ಭಾಗದಲ್ಲಿ ಸರಿಯಾದ ಬೀದಿ ದೀಪಗಳು, ಕುಡಿಯುವ ನೀರಿಲ್ಲದೆ ಪರಿತಪ್ಪಿಸುವ ಜೊತೆ ಕಾಡು ಜನರು ವಾಸಿಸು ವುದಕ್ಕಿಂತ ಕೀಳಾಗಿ ವಾಸಿಸುತ್ತಿದ್ದಾರೆ. ಪಟ್ಟಣದ 31 ಎಕರೆ ಪ್ರದೇಶ (ಎಚ್.ಡಿ.ದೇವೇಗೌಡ ಬಡಾವಣೆ), ಮೂರ್ತಿಹಾಳ್, ಬೋವಿ ಕಾಲೋನಿಯಲ್ಲಿ ವಾಸಿಸುತ್ತಿರುವ ಅಲೆಮಾರಿ ಕುಟುಂಬಗಳಿಗೆ ಮೂಲಭೂತ ಸೌಕರ್ಯ ದೊರಕುತ್ತಿಲ್ಲ. ಬಹುತೇಕ ಕುಟುಂಬಗಳು ಸರ್ಕಾರದ ಯೋಜನೆಗಳಿಂದ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆಲ್ಲ ಅಧಿಕಾರಿಗಳು ನೇರ ಹೊಣೆ ಗಾರರು ಎಂದು ಅಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಪೂರ್ಣಿಮಾ, ಅಲೆಮಾರಿ ಅರೇ ಅಲೆಮಾರಿ ಸಂಘಟನೆಗಳ ಮುಖಂಡರಾದ ಶಂಕರಪ್ಪ, ಜಿಲ್ಲಾ ಕುಳುವ ಸಮಾಜದ ಮುಖಂಡ ಕೆ.ವಿ.ಮಂಜುನಾಥ್, ಗುಂಡ, ದಾನಪ್ಪ, ಜಗದೀಶ್, ನಾರಾಯಣಮೂರ್ತಿ, ಗಜೇಂದ್ರ, ನದೀಂ,ಗೋವಿಂದ, ಸಚ್ಚಿನ್, ಮಂಜುನಾಥ್, ಮುನೀರ್ ಹೆಣ್ಣು ಮಕ್ಕಳು ಸೇರಿದಂತೆ ಮತ್ತಿತರಿದ್ದರು.
-- ಬಾಕ್ಸ್ ಸುದ್ದಿಗೆ---ನಮ್ಮ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಆವರಣದಲ್ಲಿ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವಂತೆ ಪಟ್ಟು ಹಿಡಿದು ಕಚೇರಿ ಆವರಣದಲ್ಲಿ ಶಾಮಿಯಾನ ಹಾಕಿಕೊಂಡು ಊಟ ತಯಾರಿಸಿ ಪ್ರತಿಭಟನೆ ಮುಂದುವರಿಸಿದರು. ಆನಂತರ ತರೀಕೆರೆ ಉಪವಿಭಾಗಾಧಿಕಾರಿ ಡಾ. ಕೆ.ಜೆ. ಕಾಂತರಾಜ್ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಒಂದು ತಿಂಗಳೊಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು. 2ಕೆಕೆಡಿಯು1.
ಕಡೂರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಅಲೆಮಾರಿ ಅರೇ ಅಲೆಮಾರಿ ಮತ್ತು ಹಿಂದುಳಿದ ಸಮುದಾಯಗಳಿಂದ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಟಿ.ಮೂರ್ತಿ, ದಾನಪ್ಪ, ಶಂಕರಪ್ಪ, ಗಜೇಂದ್ರ ಮತ್ತಿತರಿದ್ದರು.