ಹಾನಗಲ್ಲ ತಾಲೂಕು ಬೆಳಗಾಲಪೇಟೆ ಪಕ್ಕದ ಹುಲ್ಲುಗಾವಲು ಗುಡ್ಡದಲ್ಲಿ ಅನಧಿಕೃತವಾಗಿ ಧರ್ಮದ ಹೆಸರಿನಲ್ಲಿ ಅತಿಕ್ರಮಣಕ್ಕೆ ಅವಕಾಶ ಮಾಡಿಕೊಟ್ಟಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಹಾನಗಲ್ಲಿನ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿ, ತೆರವಿಗೆ ಒಂದು ವಾರದ ಗಡುವು ನೀಡಿದೆ.

ಹಾನಗಲ್ಲ: ತಾಲೂಕು ಬೆಳಗಾಲಪೇಟೆ ಪಕ್ಕದ ಹುಲ್ಲುಗಾವಲು ಗುಡ್ಡದಲ್ಲಿ ಅನಧಿಕೃತವಾಗಿ ಧರ್ಮದ ಹೆಸರಿನಲ್ಲಿ ಅತಿಕ್ರಮಣಕ್ಕೆ ಅವಕಾಶ ಮಾಡಿಕೊಟ್ಟಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಹಾನಗಲ್ಲಿನ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿ, ತೆರವಿಗೆ ಒಂದು ವಾರದ ಗಡುವು ನೀಡಿದೆ.

ಬುಧವಾರ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಿಂದ ತಹಸೀಲ್ದಾರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ ಎಸ್. ರೇಣುಕಾ ಅವರಿಗೆ ಮನವಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಮುಚ್ಚಂಡಿ, ಬೆಳಗಾಲಪೇಟೆಯ ಬೆಳಗಾಲ ಗುಡ್ಡ, ಅದು ಹುಲ್ಲುಗಾವಲು. ಈ ಗುಡ್ಡದಲ್ಲಿ ಒಂದು ಧರ್ಮಕ್ಕೆ ಸೇರಿದವರು ಅನಧಿಕೃವಾಗಿ ಕಟ್ಟಡವೊಂದನ್ನು ಕಟ್ಟಿಕೊಂಡು, ಅನಧಿಕೃತವಾಗಿ ವಿದ್ಯುತ್ ಸಂಪರ್ಕವನ್ನು ಕೂಡ ಹೊಂದಿ, ಕೊಳವೆಬಾವಿ ತೆಗೆಸಿ ಬಳಸಿಕೊಂಡು, ಇದು ತಮ್ಮದೇ ಆಸ್ತಿ ಎಂದು ವಹಿವಾಟು ಮಾಡುತ್ತಿರುವುದು ತಾಲೂಕು ಆಡಳಿತಕ್ಕೆ ತಿಳಿದಿದ್ದರೂ ಜಾಣ ಮೌನ ವಹಿಸಿರುವುದು ಆಡಳಿತ ವೈಫಲ್ಯ ಮಾತ್ರವಲ್ಲ, ಉದ್ದೇಶಪೂರ್ವಕ ನಡವಳಿಕೆಯಾಗಿದೆ. ಕೂಡಲೇ ಇದನ್ನು ತೆರವುಗೊಳಿಸಿ ಜಾನುವಾರುಗಳಿಗಾಗಿ ಹುಲ್ಲುಗಾವಲಾಗಿಯೇ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಹಿಂದೂ ಜಾಗರಣೆ ವೇದಿಕೆ ತಾಲೂಕು ಅಧ್ಯಕ್ಷ ಹರೀಶ ಹಾನಗಲ್ಲ ಮಾತನಾಡಿ, ಇದನ್ನು ಗ್ರಾಮಗಳ ಜಾನುವಾರುಗಳ ಹಿತಕ್ಕಾಗಿ ಹುಲ್ಲುಗಾವಲು ಎಂದು ಉಳಿಸಲು ಆದೇಶಿಸುವವರೆಗೆ ನಾವು ಹಿಂದೆ ಸರಿಯುವುದಿಲ್ಲ. ಕೂಡಲೇ ಅನಧಿಕೃತ ಕಟ್ಟಡ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ ಎಸ್. ರೇಣುಕಾ ಹಾಗೂ ಪ್ರತಿಭಟನಾಕಾರರ ನಡುವೆ ಒಂದಷ್ಟು ಕಾಲ ವಾದ-ವಿವಾದ, ವಾಗ್ವಾದಗಳು ನಡೆದವು. ತಹಸೀಲ್ದಾರ ಎಸ್. ರೇಣುಕಾ ಪ್ರತಿಭಟನಾಕಾರರಿಗೆ ಗಡುವಿನೊಳಗೆ ಈ ಅನಧಿಕೃತ ಕಟ್ಟಡದ ಬಗೆಗೆ ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳ ಜತೆಗೆ ಚರ್ಚಿಸಿ, ಜಿಲ್ಲಾಧಿಕಾರಿ ಮಾರ್ಗದರ್ಶನ ಪಡೆದು ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಅಧಿಕಾರಿಗಳಾದ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಹೆಸ್ಕಾಂ ಎಇಇ ವಿ.ಎಸ್. ಮರಿಗೌಡರ, ಪಿಎಸ್‌ಐ ಸಂಪತ್ ಅನಿಕಿವಿ ಈ ಸಂದರ್ಭದಲ್ಲಿದ್ದರು.

ಪ್ರತಿಭಟನೆಯಲ್ಲಿ ಮುಖಂಡ ರವಿ ಪುರೋಹಿತ, ಸಿದ್ದಲಿಂಗಪ್ಪ ಕಮಡೊಳ್ಳಿ, ಹರೀಶ ಹಾನಗಲ್ಲ, ನಿಖಿತ ಹದಳಗಿ, ನಾಗರಾಜ ಹೆಬ್ಬಾರ, ಶಿವನಾಗ ನೀರಲಗಿ, ಹರೀಶ ತಳವಾರ, ಸಚಿನ ರಾಮಣ್ಣನವರ, ರವಿ ನೆಗಳೂರ, ಬಸವರಾಜ ಹಾದಿಮನಿ, ಮನೋಜ ಕಲಾಲ, ಬಸವರಾಜ ಮಟ್ಟಮನಿ, ಮನೋಜ ಆಲದಕಟ್ಟಿ, ಗುರುರಾಜ ಆರೇರ, ಶಾಂತವೀರ ನೆಲೋಗಲ್ಲ, ಜಯಲಿಂಗಪ್ಪ ಹಳಕೊಪ್ಪ, ಮೌನೇಶ ಮೆಳ್ಳಾಗಟ್ಟಿ, ನಿಸ್ಸೀಮಗೌಡ ಪಾಟೀಲ, ಪಂಚಾಕ್ಷರಿ ಮೆಣಸಿನಕಾಯಿ, ಜಗದೀಶ ಮೆಣಸಿನಕಾಯಿ ಇದ್ದರು.