ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದ ಹಿರೇಕೆರೆಯ ಏರಿಯನ್ನು ಕಾನೂನು ಬಾಹಿರವಾಗಿ ಒಡೆದು ರಸ್ತೆ ನಿರ್ಮಿಸಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಹೆಬ್ಬಾಳು ಗ್ರಾಮದ ಹಾಲಿನ ಡೈರಿ ನಿರ್ದೇಶಕ ಜಗದೀಶ್ ವೇದಮೂರ್ತಿ ಆರೋಪಿಸಿದರು. ಹೆಬ್ಬಾಳು ಗ್ರಾಪಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಹೆಬ್ಬಾಳು ಗ್ರಾಮದ ಪ್ರಮುಖ ಕೆರೆಯಲ್ಲಿ ಒಂದಾದ ಹಿರೆಕೆರೆ ಸುಮಾರು 300 ಎಕರೆಗೂ ಹೆಚ್ಚು ನೀರಾವರಿ ಸೌಲಭ್ಯ ಹೊಂದಿದೆ. ಅಲ್ಲದೆ ಹೆಬ್ಬಾಳು ಏತನೀರಾವರಿ ಯೋಜನೆ ಕೂಡ ಅನುಮೋದನೆಯಾದರೆ ಇದೇ ಕೆರೆಗೆ ನೀರು ಹರಿಯುತ್ತದೆ. ಇಂತಹ ಪ್ರಮುಖ ಕೆರೆಯ ಏರಿಯನ್ನು ಹೆಬ್ಬಾಳು ಗ್ರಾಮದ ರೇಣುಕಯ್ಯ ಎಂಬ ವ್ಯಕ್ತಿ ಕೆರೆಯ ಏರಿಯನ್ನು ಒಡೆದು ತಮ್ಮ ಜಮೀನಿಗೆ ರಸ್ತೆಯನ್ನು ಮಾಡಿಕೊಂಡು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿದ್ದಾರೆ. ಈ ಸಂಬಂಧ ನಾವುಗಳು ಹಾಸನ ಜಿಲ್ಲಾಧಿಕಾರಿ, ಜಿಪಂ ಸಿಇಒ ಸಣ್ಣ ನೀರಾವರಿ ಇಲಾಖೆ, ಬೇಲೂರು ತಹಸೀಲ್ದಾರ್, ತಾಪಂ ಇಒ, ಗ್ರಾಪಂ ಪಿಡಿಒಗೆ ಖುದ್ದು ಲಿಖಿತ ರೂಪದಲ್ಲಿ ದೂರು ನೀಡಿ ಮನವಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ ಎಂದು ಕಿಡಿಕಾರಿದರು.
ಗ್ರಾಪಂ ಪಿಡಿಒ ಸ್ಥಳಕ್ಕೆ ತೆರಳಿ ಒಡೆದ ಏರಿಯನ್ನು ಮುಚ್ಚಿಸಿದ್ದಾರೆ. ಆದರೆ, ಇಲ್ಲಿಯತನಕ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ಗ್ರಾಪಂಗೆ ಸಂಪೂರ್ಣ ಅಧಿಕಾರವಿದ್ದರೂ ಇಲ್ಲಿನ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದ ಅವರು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು . ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ರಾಜು. ಮಲ್ಲೇಶ, ಹರ್ಷ, ಪ್ರಸನ್ನ, ಪ್ರಕಾಶ್, ಅನಿಲ್ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.