ರೈತರ ಪಾಲಿನ ಹಣ ನೀಡಲು ಸಕ್ಕರೆ ಕಾರ್ಖಾನೆ ತಡಯಾಜ್ಞೆ ತಂದಿದ್ದರೂ ಸರ್ಕಾರ ಇದನ್ನು ತೆರವುಗೊಳಿಸಿ ರೈತರ ನೆರವಿಗೆ ಮುಂದಾಗಿಲ್ಲ. ಹೇಮಗಿರಿ ಸಕ್ಕರೆ ಕಾರ್ಖಾನೆ ತಾನು ತಂದಿರುವ ತಡೆಯಾಜ್ಞೆಯನ್ನು ಹಿಂಪಡೆಯಬೇಕು. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ವಹಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಮಾಕವಳ್ಳಿ ಬಳಿಯ ಹೇಮಗಿರಿ ಷುಗರ್ಸ್ ಕಾರ್ಖಾನೆಯ ರೈತ ವಿರೋಧಿ ನೀತಿ ಖಂಡಿಸಿ ಜೂ.15 ರಂದು ಪಟ್ಟಣದ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ತಾಲೂಕು ರೈತಸಂಘ ನಿರ್ಧರಿಸಿದೆ.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಭೆ ನಡೆಸಿ ರೈತ ಚಳವಳಿ ರೂಪುರೇಖೆಗಳ ಬಗ್ಗೆ ಚರ್ಚಿಸಿದ ರೈತ ಮುಖಂಡರು ಈ ಕುರಿತ ಕರಪತ್ರ ಬಿಡುಗಡೆ ಮಾಡಿದ ನಂತರ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಈ ಹಿಂದೆ ರೈತಸಂಘ 109 ದಿನ ಹಗಲು-ರಾತ್ರಿ ಬೀದಿ ಹೋರಾಟ ನಡೆಸಿದ ಫಲವಾಗಿ ರೈತರ ಪ್ರತಿ ಟನ್ ಕಬ್ಬಿಗೆ ಸರ್ಕಾರದ ವತಿಯಿಂದ 50 ರು. ಮತ್ತು ಕಾರ್ಖಾನೆ ವತಿಯಿಂದ 50 ರು. ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಯಿತು ಎಂದರು.

ಸರ್ಕಾರದ ಮಟ್ಟದಲ್ಲಿ ನಿರ್ಧರಿತವಾದ ತೀರ್ಮಾನ ಜಾರಿಗೊಳಿಸುವಷ್ಟರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರದ ವಿರುದ್ಧ ಕೆಲವು ಸಕ್ಕರೆ ಕಾರ್ಖಾನೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದವು. ಈ ವೇಳೆ ರಾಜ್ಯ ಸರ್ಕಾರ ರೈತರ ನೆರವಿಗೆ ಬರಲ್ಲಿಲ್ಲ. ಆದರೆ, ರೈತ ಸಂಘಟನೆ ಕಾರ್ಖಾನೆಗಳ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಿದಾಗ ಕೆಲವು ವಕೀಲರು ತೀರ್ಪು ರೈತರ ಪರ ಬರುವಂತೆ ನೋಡಿಕೊಂಡರು ಎಂದರು.

ನ್ಯಾಯಾಲಯದ ಆದೇಶ ಹಿಡಿದು ರೈತಸಂಘ ಅಂದಿನ ರಾಜ್ಯ ಸಕ್ಕರೆ ಸಚಿವ ಶಿವಾನಂದ ಪಾಟೀಲರ ಜೊತೆ ಸಭೆ ನಡೆಸಿ ರಾಜ್ಯ ಸರ್ಕಾರ ಮತ್ತು ಕಾರ್ಖಾನೆಗಳ ಮೂಲಕ ರೈತರ ಪ್ರತಿ ಟನ್‌ಗೆ ನೀಡಬೇಕಾದ ಹಿಂಬಾಕಿ ಹಣವನ್ನು ನೀಡುವಂತೆ ಆಗ್ರಹಿಸಲಾಗಿತ್ತು. ಸರ್ಕಾರ ತಾನು ನೀಡಬೇಕಾದ 50 ರು. ಪ್ರೋತ್ಸಾಹ ಧನ ಬಿಡುಗಡೆ ಮಾಡಿದೆ ಎಂದರು.

ಕೆಲವು ಸಕ್ಕರೆ ಕಾರ್ಖಾನೆಗಳು ತಮ್ಮ ಪಾಲಿನ 50 ರು. ಪಾವತಿಸಿವೆ. ಆದರೆ, ತಾಲೂಕಿನ ಹೇಮಗಿರಿ ಷುಗರ್ಸ್ ಕಂಪನಿ ನ್ಯಾಯಾಲಯದ ಆದೇಶದ ವಿರುದ್ಧ ತಡೆಯಾಜ್ಞೆ ತಂದಿದೆ. ರೈತರ ಖಾತೆಗೆ ಪಾವತಿಸಬೇಕಾದ ಪ್ರತಿ ಟನ್ ಕಬ್ಬಿನ 50 ರು. ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪಾಲಿನ ಹಣ ನೀಡಲು ಸಕ್ಕರೆ ಕಾರ್ಖಾನೆ ತಡಯಾಜ್ಞೆ ತಂದಿದ್ದರೂ ಸರ್ಕಾರ ಇದನ್ನು ತೆರವುಗೊಳಿಸಿ ರೈತರ ನೆರವಿಗೆ ಮುಂದಾಗಿಲ್ಲ. ಹೇಮಗಿರಿ ಸಕ್ಕರೆ ಕಾರ್ಖಾನೆ ತಾನು ತಂದಿರುವ ತಡೆಯಾಜ್ಞೆಯನ್ನು ಹಿಂಪಡೆಯಬೇಕು. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ವಹಿಸಬೇಕು. 50 ರು. ಪ್ರೋತ್ಸಾಹ ಧನ ಪಾವತಿಸಿದ ನಂತರವೇ ಕಾರ್ಖಾನೆ ಪ್ರಸಕ್ತ ಸಾಲಿನ ತನ್ನ ಕಬ್ಬು ಅರೆಯುವಿಕೆಯ ಕಾರ್ಯ ಆರಂಭಿಸಬೇಕು. ತಪ್ಪಿದಲ್ಲಿ ಕಾರ್ಖಾನೆಯಲ್ಲಿ ಕಬ್ಬು ಅರೆವಿಕೆಗೆ ರೈತಸಂಘ ತಡೆಯೊಡ್ಡಲಿದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ರಾಜ್ಯ ರೈತಸಂಘ ಮುಖಂಡರಾದ ಕೆ.ಆರ್.ಜಯರಾಂ, ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಜಿಲ್ಲಾ ಉಪಾಧ್ಯಕ್ಷ ಶಂಕರ್, ತಾಲೂಕು ರೈತ ಮುಖಂಡರಾದ ತಮ್ಮಯ್ಯ, ಎಲ್.ಬಿ.ಜಗದೀಶ್, ಕುಮಾರ್, ಹೊನ್ನೇಗೌಡ, ಮಹೇಶ್, ಕೃಷ್ಣೇಗೌಡ, ನಾರಾಯಣಸ್ವಾಮಿ, ನಾಗರಾಜು, ಪ್ರಕಾಶ್, ರಾಜಣ್ಣ,ದೇವರಾಜು ಸೇರಿದಂತೆ ಹಲವರಿದ್ದರು.