ಭಟ್ಕಳ: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಭಟ್ಕಳ ಪಟ್ಟಣದಿಂದ ಸಾಗರ ರಸ್ತೆಯ ಕಡೆಗೆ ಕಾರಿನಲ್ಲಿ ಕರೆದೊಯ್ಯುತ್ತಿರುವುದನ್ನು ಪ್ರಶ್ನಿಸಿದ ಹಿಂದೂ ಕಾರ್ಯರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಹಿಂದೂ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ಭಟ್ಕಳ ನಗರ ಠಾಣೆ ಮುಂದೆ ಬುಧವಾರ ರಾತ್ರಿ ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಈ ಕುರಿತು ಠಾಣೆ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಘಟನೆ ನಡೆದ ತಕ್ಷಣ ಆರೋಪಿ ಮೇಲೆ ಪ್ರಕರಣ ದಾಖಲಿಸುವುದನ್ನು ಬಿಟ್ಟು ಹಿಂದೂ ಯುವತಿ ರಕ್ಷಣೆಗೆ ಹೋದವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ತೀವ್ರ ಖಂಡನೀಯ. ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲು ಯಾರ ಒತ್ತಡವಿದೆ. ಭಟ್ಕಳದಲ್ಲಿ ಸುಮಾರಷ್ಟು ಪ್ರಕರಣ ನಡೆದಿದ್ದರೂ ಸರಿಯಾದ ಸಾಕ್ಷ್ಯ ಇಲ್ಲದೇ ಇಷ್ಟು ದಿನ ಸುಮ್ಮನಿದ್ದೆವು. ಆದರೆ, ಬುಧವಾರ ಬೆಳಗ್ಗೆ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ತಿಳಿದುಕೊಂಡಿದ್ದರೂ ಆರೋಪಿ ಮೇಲೆ ಕೇಸು ದಾಖಲಿಸುವುದನ್ನು ಬಿಟ್ಟು ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದೀರಿ. ಸ್ಥಳದಲ್ಲಿ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್, ಪಿಎಸೈ ಇದ್ದರೂ ಯಾಕೆ ಆರೋಪಿ ಮೇಲೆ ಕ್ರಮ ಕೈಗೊಂಡಿಲ್ಲ. ಆರೋಪಿಯಿಂದ ತ್ವರಿತವಾಗಿ ಪ್ರಕರಣ ದಾಖಲಿಸಿಕೊಂಡು, ನಮ್ಮಿಂದ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿರುವುದು ಯಾಕೆ ಎಂದು ಖಾರವಾಗಿ ಪ್ರಶ್ನಿಸಿದರು.ಹಿಂದೂ ಯುವತಿಯನ್ನು ಕಾರಿನಲ್ಲಿ ಕರೆದೊಯ್ದ ಆರೋಪಿಯನ್ನು ತಕ್ಷಣ ಬಂಧಿಸಬೇಕು. ಈತ ಈ ಹಿಂದೆ ಇಂತಹ ಕೃತ್ಯ ಎಷ್ಟು ಎಸಗಿದ್ದಾನೆ ಎನ್ನುವುದನ್ನು ತನಿಖೆ ನಡೆಸಬೇಕು. ಹಿಂದೂ ಕಾರ್ಯಕರ್ತರ ಮೇಲಿನ ಕೇಸನ್ನು ವಾಪಾಸ್ ಪಡೆಯದೇ ಇದ್ದಲ್ಲಿ ಭಟ್ಕಳ ಚಲೋಗೆ ಕರೆ ನೀಡಬೇಕಾದೀತು ಎಂದು ಎಚ್ಚರಿಕೆ ನೀಡಿದರು.ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದನ್ನು ಉಪಸ್ಥಿತರಿದ್ದ ಮಾಜಿ ಸಚಿವ ಶಿವಾನಂದ ನಾಯ್ಕ, ಮುಖಂಡರಾದ ಈಶ್ವರ ಎನ್. ನಾಯ್ಕ, ಸುಬ್ರಾಯ ದೇವಡಿಗ, ಕೃಷ್ಣ ನಾಯ್ಕ ಆಸರಕೇರಿ ಮುಂತಾದವರು ಖಂಡಿಸಿ, ಪ್ರಕರಣ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು. ಡಿವೈಎಸ್ಪಿ ಗಿರೀಶ ಅವರು ಗುರುವಾರ ಬೆಳಗ್ಗೆ ಪ್ರಕರಣ ಇತ್ಯರ್ಥ ಪಡಿಸಲಾಗುವುದು ಎಂದರು.
ಜಿಲ್ಲಾ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಭಟ್ಕಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದಿದ್ದಾರೆ. ನಾಳೆ ಒಳಗೆ ಹಿಂದೂ ಕಾರ್ಯಕರ್ತರ ಮೇಲೆ ಹಾಕಿದ ಪ್ರಕರಣ ವಾಪಸ್ ಪಡೆಯದೇ ಇದ್ದಲ್ಲಿ ಭಟ್ಕಳ ಬಂದ್‌ಗೆ ಕರೆ ಕೊಡುವುದಾಗಿ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಯಂತ ನಾಯ್ಕ, ರಾಮಕೃಷ್ಣ ನಾಯ್ಕ, ಬಿಜೆಪಿಯ ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ, ಶ್ರೀನಿವಾಸ ನಾಯ್ಕ ಹನುಮಾನ ನಗರ ಸೇರಿದಂತೆ ಹಲವರಿದ್ದರು.
ಮುಸ್ಲೀ ಯುವಕನಿಂದ ದೂರು
ನನ್ನನ್ನು ಅಡ್ಡಗಟ್ಟಿ ಹೊಡೆದಿದ್ದಾರೆ ಎಂದು ಮೂವರು ಹಿಂದೂ ಕಾರ್ಯಕರ್ತರ ಮೇಲೆ ಮುಸ್ಲಿಂ ಯುವಕ ಬುಧವಾರ ಬೆಳಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಯುವತಿಯಿಂದಲೂ ಯುವಕನ ಮೇಲೆ ದೂರು: ಹಿಂದೂ ಯುವತಿಯೂ ಮುಸ್ಲಿಂ ಯುವಕನ ಮೇಲೆ ಬುಧವಾರ ಸಂಜೆ ದೂರು ನೀಡಿದ್ದಾಳೆ. ದೂರಿನಲ್ಲಿ ಏನು ತಿಳಿಸಿದ್ದಾಳೆ ಎನ್ನುವುದು ಇನ್ನೂ ಸ್ಪಷ್ಟ ಆಗಿಲ್ಲ. ಇದೊಂದು ಸೂಕ್ಷ್ಮ ವಿಚಾರದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಮತ್ತೆ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.