ಮನೆಗಳ ತೆರವು ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ

| Published : Dec 04 2024, 12:32 AM IST

ಸಾರಾಂಶ

೮.೪೫ ಎಕರೆ ಪ್ರದೇಶದಲ್ಲಿನ ಮನೆಗಳ ತೆರವುಗೊಳಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಅಲ್ಲಿನ ನಿವಾಸಿಗಳು ತೆರವಿಗೆ ಆಗಮಿಸಿದ್ದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಸಂಡೂರು: ತಾಲೂಕಿನ ಕುರೆಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ ಬರುವ ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದಲ್ಲಿನ ೧೭, ೧೮, ೧೯ ಹಾಗೂ ೨೦ನೇ ವಾರ್ಡ್‌ಗಳ ವ್ಯಾಪ್ತಿಯಲ್ಲಿನ ೮.೪೫ ಎಕರೆ ಪ್ರದೇಶದಲ್ಲಿನ ಮನೆಗಳ ತೆರವುಗೊಳಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಅಲ್ಲಿನ ನಿವಾಸಿಗಳು ತೆರವಿಗೆ ಆಗಮಿಸಿದ್ದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ನಾಗಿರೆಡ್ಡಿ ಎಂಬುವವರು ೧೯೯೮ರಲ್ಲಿ ಈ ಜಮೀನನ್ನು ತಾವು ಖರೀದಿಸಿರುವುದಾಗಿ ತಿಳಿಸಿ, ತಮ್ಮ ಜಮೀನಿನಲ್ಲಿ ಜನರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಸಂಡೂರಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ನ್ಯಾಯಾಲಯದಲ್ಲಿ ನಾಗಿರೆಡ್ಡಿಯವರ ಪರವಾಗಿ ತೀರ್ಪು ಬಂದಿದೆ. ಸ್ಥಳೀಯರು ತೀರ್ಪಿನ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಅಲ್ಲಿಯೂ ನಾಗಿರೆಡ್ಡಿಯವರ ಪರವಾಗಿ ತೀರ್ಪು ಬಂದಿದೆ. ಇದನ್ನು ಪ್ರಶ್ನಿಸಿ ಸ್ಥಳೀಯರು ಧಾರವಾಡದಲ್ಲಿನ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಹೈಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದೆ.

ನ್ಯಾಯಾಲಯದ ಆದೇಶದ ಅನುಸಾರ ನ್ಯಾಯಾಲಯದ ಸಿಬ್ಬಂದಿ ಬುಧವಾರ ಪೊಲೀಸರ ರಕ್ಷಣೆಯಲ್ಲಿ ಈ ಪ್ರದೇಶದಲ್ಲಿ ನಿರ್ಮಿಸಿಕೊಂಡಿರುವ ಮನೆಗಳ ತೆರವಿಗೆ ತೆರಳಿದಾಗ ಸ್ಥಳೀಯರು ವಿರೋಧಿಸಿದರು. ವಾಹನಗಳನ್ನು ಅಡ್ಡಗಟ್ಟಿ ತೆರವುಗೊಳಿಸುವ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.

ಇದು ಸರ್ಕಾರಿ ಜಾಗ:

ವಿವಾದಕ್ಕೀಡಾಗಿರುವ ಪ್ರದೇಶ ಸರ್ಕಾರಿ ಜಮೀನು. ಈ ಪ್ರದೇಶದಲ್ಲಿ ೧೯೬೦ರಿಂದ ಸಾವಿರಾರು ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದೇವೆ. ಈ ಪ್ರದೇಶದಲ್ಲೀಗ ಸುಮಾರು ೨೦೦೦ ಮನೆಗಳಿವೆ. ಇಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ವಿದ್ಯುತ್ ಬಿಲ್ ಕಟ್ಟುತ್ತಿದ್ದೇವೆ. ನಮ್ಮ ಮನೆಗಳಿಗೆ ಭಾಗ್ಯಜ್ಯೋತಿ ಯೋಜನೆ ಅನ್ವಯ ವಿದ್ಯುತ್ ಸರಬರಾಜಾಗುತ್ತಿದೆ. ಈಗ ನಾಗಿರೆಡ್ಡಿ ಎನ್ನುವವರು ಈ ಜಮೀನು ನಮಗೆ ಸೇರಿದ್ದು ಎಂದು ದಾಖಲೆಗಳನ್ನು ಸೃಷ್ಟಿಸಿ, ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ನ್ಯಾಯಾಲಯದಿಂದ ಆದೇಶ ಪಡೆದು, ತಾವು ವಾಸಿಸುತ್ತಿರುವ ಮನೆಗಳ ತೆರವಿಗೆ ಮುಂದಾಗಿದ್ದಾರೆ. ಇಲ್ಲಿ ವಾಸಿಸುತ್ತಿರುವವರು ಬಡವರು. ನಾವು ಯಾವುದೇ ಕಾರಣಕ್ಕೂ ಮನೆಗಳನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂಬುದು ಸ್ಥಳೀಯರ ವಾದವಾಗಿದೆ.

ಈ ಪ್ರಕರಣದ ವಿಚಾರಣೆ ಧಾರವಾಡದ ಹೈಕೋರ್ಟಿನಲ್ಲಿ ನಡೆಯುತ್ತಿದೆ. ಅಲ್ಲಿನ ತೀರ್ಪು ಬರುವ ಮುನ್ನವೇ ನಾಗಿರೆಡ್ಡಿಯವರು ಮನೆಗಳ ತೆರವಿಗೆ ಮುಂದಾಗಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ವಾರ್ಡಿನ ನಿವಾಸಿಗಳು ಹಾಗೂ ಪುರಸಭೆ ಸದಸ್ಯರೂ ಆಗಿರುವ ವೆಂಕಟೇಶ್, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಎನ್.ವಿ. ಬಸವರಾಜ್, ವಕೀಲರಾದ ಕುಮಾರಸ್ವಾಮಿ, ಸ್ಥಳೀಯರಾದ ಹೆಚ್.ಎಂ. ಭಾಷಾ ಮುಂತಾದವರು ಕನ್ನಡಪ್ರಭದೊಂದಿಗೆ ಮಾತನಾಡಿ, ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದ ಬಳಿಯ ೮.೪೫ ಎಕರೆ ಸರ್ಕಾರಿ ಜಾಗದಲ್ಲಿ ೬೦-೭೦ ವರ್ಷಗಳಿಂದ ಬಡ ಜನತೆ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಮನೆಗಳಿಗೆ ಟ್ಯಾಕ್ಸ್ ಕಟ್ಟುತ್ತಿದ್ದಾರೆ. ವಿದ್ಯುತ್ ಬಿಲ್ ಕಟ್ಟುತ್ತಿದ್ದಾರೆ. ನಾಗಿರೆಡ್ಡಿ ಎಂಬುವವರು ಈ ಜಮೀನು ತಮಗೆ ಸೇರಿದ್ದೆಂದು ಆರೋಪಿಸಿ, ಇಲ್ಲಿನ ಮನೆಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಈ ಪ್ರಕರಣದ ವಿಚಾರಣೆ ಹೈಕೋರ್ಟಿನಲ್ಲಿ ಬಾಕಿ ಇದೆ. ಈಗ ನಾಗಿರೆಡ್ಡಿಯವರು ಜನರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಇದಕ್ಕೆ ಜನರ ವಿರೋಧವಿದೆ ಎಂದರು.