ಅಕ್ರಮ ಮದ್ಯ ವಿರೋಧಿಸಿ ಪ್ರತಿಭಟನೆ: ನೂರಾರು ಮಹಿಳೆಯರು ಭಾಗಿ
KannadaprabhaNewsNetwork | Published : Oct 21 2023, 12:31 AM IST
ಅಕ್ರಮ ಮದ್ಯ ವಿರೋಧಿಸಿ ಪ್ರತಿಭಟನೆ: ನೂರಾರು ಮಹಿಳೆಯರು ಭಾಗಿ
ಸಾರಾಂಶ
ಅಕ್ರಮ ಮದ್ಯ ವಿರೋಧಿಸಿ ಪ್ರತಿಭಟನೆ: ನೂರಾರು ಮಹಿಳೆಯರು ಭಾಗಿ
ಅಗಳಗಂಡಿ ಸಮೀಪದ ಗಡಿಕಲ್ಲಿನಲ್ಲಿ ಸಾರಾಯಿ ವಿರೋಧಿ ಹೋರಾಟ ಕನ್ನಡಪ್ರಭ ವಾರ್ತೆ, ಕೊಪ್ಪ ಗ್ರಾಮೀಣ ಭಾಗಕ್ಕೆ ನಿವೇಶನ, ವಸತಿ, ಹಕ್ಕುಪತ್ರ, ರಸ್ತೆ, ನೀರು, ಆಸ್ಪತ್ರೆಗಳಂತಹ ಮೂಲಭೂತ ಸೌಕರ್ಯಗಳನ್ನು ನೀಡಬೇಕಿದ್ದ ಸರ್ಕಾರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅದನ್ನು ಮರೆತು ಮದ್ಯ ಮಾರಾಟಗಾರರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಸಾರಾಯಿ ವಿರೋಧಿ ಹೋರಾಟ ಸಮಿತಿ ಸಂಚಾಲಕಿ ರಾಧಾ ಹಾಗಲಗಂಚಿ ಆರೋಪಿಸಿದ್ದಾರೆ. ಕೊಪ್ಪ ತಾಲೂಕಿನ ಅಗಳಗಂಡಿ ಸಮೀಪದ ಗಡಿಕಲ್ಲಿನಲ್ಲಿ ಸಾರಾಯಿ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತ ನಾಡಿದ ಅವರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಕಡಿವಾಣ ಹಾಕುವಲ್ಲಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ನಿರ್ಲಕ್ಷ್ಯವಹಿಸಿದೆ. ಸಮಿತಿ ಅನೇಕ ಬಾರಿ ಈ ಬಗ್ಗೆ ಮನವಿ ಮಾಡಿದ್ದು ಪೊಲೀಸರು ಒಂದಷ್ಟು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದ್ದರೂ ಕೆಲವೆಡೆ ದಿನಸಿ ಅಂಗಡಿ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮವಾಗಿ ಕಳಪೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು ಇಂತಹ ಮದ್ಯ ಸೇವಿಸಿ ಮೇಗೂರು ಗ್ರಾಮದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಅಗಳಗಂಡಿ ಸಮೀಪ ಕಚ್ಚಿಗೆ ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯದಂಗಡಿ ತೆರೆಯಲು ಸಂಚು ಮಾಡಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಮದ್ಯದಂಗಡಿ ಆರಂಭಿಸುವ ಸಂಚು ತಣ್ಣಗಾಗಿರುವಂತೆ ಕಂಡರೂ ತೆರೆಮರೆಯಲ್ಲಿ ಮದ್ಯದಂಗಡಿ ಆರಂಭಿಸುವ ಹುನ್ನಾರ ನಡೆಯುತ್ತಿದೆ. ಎಚ್ಚರಿಕೆ ಮೀರಿ ಮದ್ಯದಂಗಡಿ ಆರಂಭಿಸಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ನೂರಾರು ಮಹಿಳೆಯರು ಧರಣಿಗೂ ಮುನ್ನ ಅಗಳಗಂಡಿ ಗ್ರಾಮದಿಂದ ಕೊಪ್ಪ ಶೃಂಗೇರಿ ಗಡಿಭಾಗವಾದ ಗಡಿಕಲ್ಲುವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಹಸೀಲ್ದಾರ್, ಅಬಕಾರಿ, ಪೊಲೀಸ್ ಅಧಿಕಾರಿಗಳ ಮೂಲಕ ಹೋರಾಟಗಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕರ್ನಾಟಕ ಜನಶಕ್ತಿ ವೇದಿಕೆ ಸಂಚಾಲಕ ಗೌಸ್ ಮೊಹಿದ್ದೀನ್, ವಿವಿಧ ಸಂಘಟನೆಗಳ ಮುಖಂಡರಾದ ಭಾಗ್ಯ ಹಾಗಲಗಂಚಿ, ನಜೀರ್ ಕಚ್ಚಿಗೆ, ಆನಂದ್, ವೆಂಕಟೇಶ್, ಕೌಳಿ ರಾಮು, ಪವಿತ್ರ, ಪ್ರಭಾ, ಸುರೇಶ್, ಸರೋಜ, ಮರಿಯಪ್ಪ ಮುಂತಾದವರು ಧರಣಿಯ ನೇತೃತ್ವ ವಹಿಸಿ ಮಾತನಾಡಿದರು.