ಸಾರಾಂಶ
ಗುತ್ತಿಗೆ ಕಾಮಗಾರಿಯಲ್ಲಿ ಶೇ. 4ರಷ್ಟು ಧರ್ಮಾಧಾರಿತ ಮೀಸಲಾತಿ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಮಂಗಳವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಶೇ. 4ರಷ್ಟು ಧರ್ಮಾಧಾರಿತ ಮೀಸಲಾತಿ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಮಂಗಳವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.ವಿಭಾಗ ಸಹಕಾರ್ಯದರ್ಶಿ ಶಿವಾನಂದ ಮೆಂಡನ್ ಮಾತನಾಡಿ, ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣದ ಪರಮಾವಧಿಯಲ್ಲಿದೆ. ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಧರ್ಮಾಧಾರಿತ ಮೀಸಲಾತಿಯನ್ನು ಈ ಬಾರಿಯ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ಇದು ಸಂವಿಧಾನ ಆಶಯದ ವಿರುದ್ಧವಾಗಿದ್ದು, ಸಂವಿಧಾನದಲ್ಲಿ ಇದಕ್ಕೆ ಮಾನ್ಯತೆಯೇ ಇಲ್ಲ. ಆದರೂ ಮುಸ್ಲಿಂ ಮತದ ಓಲೈಕೆಗಾಗಿ ಸಿದ್ದರಾಮಯ್ಯ ಸರ್ಕಾರ ಈ ಮೀಸಲಾತಿ ಜಾರಿಗೊಳಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಕಾಮಗಾರಿಯ ಗುತ್ತಿಗಾರರಲ್ಲಿ ಶೇ. 50ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದವರೇ ಇದ್ದಾರೆ. ಅದರ ಜತೆಗೆ ಈಗ ಶೇ.4 ರಷ್ಟುಹೆಚ್ಚುವರಿ ಕೊಟ್ಟಿದ್ದಾರೆ. ಇತರ ಹಿಂದುಳಿದ ವರ್ಗದವರ ಮೀಸಲಾತಿಯನ್ನು ತೆಗೆದು ಈ ಮೀಸಲಾತಿ ಜಾರಿಗೊಳಿಸಲಾಗಿದೆ ಎಂದು ಆರೋಪಿಸಿದರು.ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ ಕುತ್ತಾರು, ಕಟೀಲು ದಿನೇಶ್ ಪೈ, ವಿಭಾಗ ಪ್ರಮುಖರಾದ ಪೊಳಲಿ ಗಿರಿಪ್ರಕಾಶ್ ತಂತ್ರಿ, ಜಿಲ್ಲಾ ಪ್ರಮುಖರಾದ ರವಿ ಅಸೈಗೋಳಿ, ಮನೋಹರ ಸುವರ್ಣ, ಗುರುಪ್ರಸಾದ್ ಕಡಂಬಾರು, ನವೀನ್ ಕೊಣಾಜೆ, ಗುರುಪ್ರಸಾದ್ ಉಳ್ಳಾಲ, ನವೀನ್ ಮೂಡುಶೆಡ್ಡೆ, ಪ್ರದೀಪ್ ಸರಿಪಳ್ಳ, ದೀಪಕ್ ಮರೋಳಿ, ಪ್ರದೀಪ್ ಪಂಪ್‌ವೆಲ್ ಮತ್ತಿತರರಿದ್ದರು.