ಮಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆ, ಚಿಕಿತ್ಸಾ ವೆಚ್ಚ ಏರಿಕೆ ವಿರುದ್ಧ ಪ್ರತಿಭಟನೆ

| Published : Apr 25 2025, 11:49 PM IST

ಮಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆ, ಚಿಕಿತ್ಸಾ ವೆಚ್ಚ ಏರಿಕೆ ವಿರುದ್ಧ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೋಗಿಗಳಿಗೆ ಅಗತ್ಯ ಔಷಧೋಪಚಾರ ದೊರಕುವಂತೆ ಕ್ರಮ ವಹಿಸುವುದು, ಯಾವುದೇ ಕಾರಣಕ್ಕೂ ಔಷಧ ಚೀಟಿಯನ್ನು ಹೊರಗೆ ಬರೆಯಬಾರದು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಆಸ್ಪತ್ರೆಯಲ್ಲಿ ಹೊರರೋಗಿಗಳ ಚೀಟಿ ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ವಿಧಿಸಿರುವ ಹೆಚ್ಚುವರಿ ಶುಲ್ಕ ಇಳಿಸುವುದು ಸೇರಿದಂತೆ ವೈದ್ಯರ ಅಸಮರ್ಪಕ ಕಾರ್ಯವೈಖರಿಯಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸುವಂತೆ ಒತ್ತಾಯಿಸಿ ಕರುನಾಡ ಸೇವಕರು, ಕೆಆರ್‌ಎಸ್ ಪಕ್ಷ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಮಿಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ತೆರಳಿ ಅಲ್ಲಿ ನಿಗದಿಪಡಿಸಿದ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಖುದಾಗಿ ಪರಿಶೀಲನೆ ನಡೆಸಿದರು.ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ಮಾತನಾಡಿ, ರೋಗಿಗಳ ತಪಾಸಣೆ ಮತ್ತು ಚಿಕಿತ್ಸಾ ಶುಲ್ಕ ಏರಿಕೆ ಮಾಡಿರುವುದು ಸಾಮಾನ್ಯ ಜನರಿಗೆ ಹೊರೆಯಾಗಿದ್ದು, ತಕ್ಷಣವೇ ಅದನ್ನು ಇಳಿಸಬೇಕು. ಕರ್ತವ್ಯದ ವೇಳೆ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವುದಕ್ಕೆ ಕಡಿವಾಣ ಹಾಕಬೇಕು. ಸರ್ಕಾರದ ಆದೇಶದಂತೆ ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕು. ಗುಣಮಟ್ಟದ ಚಿಕಿತ್ಸೆಯನ್ನು ಖಾತ್ರಿಗೊಳಿಸುವಂತೆ ಆಗ್ರಹಿಸಿದರು.ರೋಗಿಗಳಿಗೆ ಅಗತ್ಯ ಔಷಧೋಪಚಾರ ದೊರಕುವಂತೆ ಕ್ರಮ ವಹಿಸುವುದು, ಯಾವುದೇ ಕಾರಣಕ್ಕೂ ಔಷಧ ಚೀಟಿಯನ್ನು ಹೊರಗೆ ಬರೆಯಬಾರದು. ಆಸ್ಪತ್ರೆ ಆವರಣದ ಔಷಧಾಲಯ ಸದಾ ತೆರೆದಿರಬೇಕು. ಅಗತ್ಯ ಔಷಧಗಳೆಲ್ಲವೂ ಲಭ್ಯವಿರುವಂತೆ ನಿಗಾ ವಹಿಸುವಂತೆ ಮಿಮ್ಸ್ ನಿರ್ದೇಶಕರನ್ನು ಒತ್ತಾಯಿಸಿದರು.ಆಸ್ಪತ್ರೆಗೆ ಹೊರೆಯಾಗಿರುವ ರೋಗ ಪರೀಕ್ಷೆ, ರಾಸಾಯನಿಕ ಸರಬರಾಜುಗಳ ಖಾಸಗಿ ನಿರ್ವಹಣೆಯ ಒಪ್ಪಂದವನ್ನು ಹಿಂಪಡೆಯಬೇಕು. ಹಳೆಯ ಪದ್ಧತಿಗೆ ಮರಳಬೇಕು. ಮೆಡಿಕಲ್ ವ್ಯಾಪ್ತಿಯ ತುಂಡು ಕಾಮಗಾರಿಗಳಿಗೆಎ ತಡೆಯೊಡ್ಡಿ, ಅವುಗಳ ಗುಣಮಟ್ಟ ಪರಿಶೀಲನೆಯಾಗುವವರೆಗೆ ಬಿಲ್ ಪಾವತಿ ಮಾಡಬಾರದು. ರಾಜಕಾರಣಿಗಳ ಹಿಂಬಾಲಕರು ಬೇನಾಮಿಯಾಗಿ ನಿರ್ಮಿತಿಕೇಂದ್ರ, ಕೆಆರ್‌ಡಿಎಲ್ ಹೆಸರಿನಲ್ಲಿಉ ನಡೆಸುತ್ತಿರುವ ಕಾಮಗಾರಿಗಳು ನಿಲ್ಲಬೇಕು ಎಂದು ಆಗ್ರಹಿಸಿದರು.ತಮಿಳು ಕಾಲೋನಿ ಸೇರಿದಂತೆ ಖಾಸಗಿಯವರ ವಶವಾಗಿರುವ ಮೆಡಿಕಲ್ ಕಾಲೇಜು ಜಾಗವನ್ನು ಮಿಮ್ಸ್ ಮರಳಿ ಪಡೆಯಲು ನ್ಯಾಯಾಲಯದಲ್ಲಿ ಮಿಮ್ಸ್ ವತಿಯಿಂದ ವಕೀಲರನ್ನು ನಿಯೋಜಿಸುವುದು. ಪ್ರತಿ ವಾರ್ಡ್‌ಗಳಲ್ಲಿ ಸಲಹೆ ಹಾಗೂ ದೂರು ಪೆಟ್ಟಿಗೆಗಳನ್ನು ಅಳವಡಿಸಿ ಸ್ವೀಕೃತವಾದ ಮನವಿ, ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸುವಂತೆ ಒತ್ತಾಯಿಸಿ ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ರಮೇಶ್‌ಗೌಡ, ಕರವೇ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ ಮತ್ತಿತರರಿದ್ದರು.೨೫ಕೆಎಂಎನ್‌ಡಿ-೪ಮಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆ, ಚಿಕಿತ್ಸಾ ವೆಚ್ಚ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕರುನಾಡ ಸೇವಕರು, ಕರವೇ,ಕೆಆರ್‌ಎಸ್ ಪಕ್ಷದವರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.