ಕಟಾವಿಗೆ ದರ ಹೆಚ್ಚಳ, ಪರ್ಮಿಟ್ ನೀಡದೆ ವಿಳಂಬ ಖಂಡಿಸಿ ಪ್ರತಿಭಟನೆ

| Published : Nov 16 2024, 12:33 AM IST

ಕಟಾವಿಗೆ ದರ ಹೆಚ್ಚಳ, ಪರ್ಮಿಟ್ ನೀಡದೆ ವಿಳಂಬ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಕಬ್ಬಿಗೆ ಪ್ರತಿ ಟನ್ ಗೆ ಕನಿಷ್ಠ 1200 ರು. ನೀಡಬೇಕು. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಾಗೂ ಕಾರ್ಖಾನೆ ಕಾರ್ಮಿಕರಿಗೆ ಪ್ರತಿ ಕೆಜಿ ಸಕ್ಕರೆಗೆ 25 ರು.ನಂತೆ ಮಾರಾಟ ಮಾಡಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಕಬ್ಬಿನ ಕಟಾವು ದರ ಹೆಚ್ಚಳ, ಪರ್ಮಿಟ್ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿರುವ ತಾಲೂಕಿನ ಕೊಪ್ಪದ ಎಲ್ ಎಸ್ ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕ್ರಮ ವಿರೋಧಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತ ಸಂಘದ, ತಾಲೂಕು ಘಟಕದ ಅಧ್ಯಕ್ಷ ಆರ್. ಎಸ್. ಸೀತಾರಾಮ ನೇತೃತ್ವದಲ್ಲಿ ನೂರಾರು ರೈತರು ಕಾರ್ಖಾನೆ ಆಡಳಿತ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಕಾರ್ಖಾನೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, 15 ರಿಂದ 16 ತಿಂಗಳು ಕಳೆದಿರುವ ಒಪ್ಪಿಗೆ ಪಡೆದ ಕಬ್ಬು ಕಟಾವು ಮಾಡಲು ಅನುಮತಿ ನೀಡದೆ ವಿಳಂಬ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.

ಪ್ರತಿ ಟನ್ ಕಬ್ಬು ಕಟಾವ್ ಮಾಡಲು ಹಾಲಿ 1200 ರು.ಗಳಿಗಿಂತ ಏಕಾಏಕಿ 1400 ರು.ಗಳಿಗೆ ಹೆಚ್ಚಳ ಮಾಡಲಾಗಿದೆ. ಕಾರ್ಖಾನೆ ಆಡಳಿತ ಮಂಡಳಿ ಪ್ರತಿ ಟನ್ ಕಬ್ಬಿಗೆ 450 ರು. ನಿಗದಿ ಮಾಡಬೇಕು. ಉಳಿದ ಕಟಾವು ಹಣವನ್ನು ಕಾರ್ಖಾನೆಯೇ ಭರಿಸಬೇಕು ಎಂದು ಒತ್ತಾಯಿಸಿದರು.

ಪರ್ಮಿಟ್ ಕೊಟ್ಟಿರುವ ಕಬ್ಬಿನ ಕಟಾವಿಗೆ ಮೊದಲ ಆದ್ಯತೆ ಕೊಡಬೇಕು. ಹಿರಿತನದ ಆಧಾರದ ಮೇಲೆ ಕಟಾವಿಗೆ ಸೂಚನೆ ನೀಡಬೇಕು. ಬಳ್ಳಾರಿ ಮತ್ತು ಮಹಾರಾಷ್ಟ್ರದಿಂದ ಟ್ರ್ಯಾಕ್ಟರ್ ಮತ್ತು ಲಾರಿಗಳನ್ನು ಕರೆಸಿ ಕಾರ್ಖಾನೆಗೆ ಕಬ್ಬು ಸಾಗಾಣಿಕೆ ಮಾಡಿಕೊಳ್ಳುವ ಪ್ರವೃತ್ತಿ ಕೈ ಬಿಟ್ಟು ಸ್ಥಳೀಯ ವಾಹನಗಳಿಂದ ಸಾಗಾಣಿಕೆ ಮಾಡಿಕೊಳ್ಳಬೇಕು. ಕಾರ್ಖಾನೆಗೆ ಕಬ್ಬು ಸಾಗಾಣಿಕೆ ಮಾಡಿಕೊಂಡ 15 ದಿನದಲ್ಲಿ ಕಬ್ಬಿನ ಬಾಕಿ ಹಣ ಪಾವತಿ ಮಾಡಬೇಕು. ಕಳೆದ ವರ್ಷದ ಕಬ್ಬಿನ ಬಾಕಿ ಹಣವನ್ನು ನ್ಯಾಯಾಲಯದ ಆದೇಶದಂತೆ ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿದರು.

ಬೇಸಿಗೆ ಕಬ್ಬಿಗೆ ಪ್ರತಿ ಟನ್ ಗೆ ಕನಿಷ್ಠ 1200 ರು. ನೀಡಬೇಕು. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಾಗೂ ಕಾರ್ಖಾನೆ ಕಾರ್ಮಿಕರಿಗೆ ಪ್ರತಿ ಕೆಜಿ ಸಕ್ಕರೆಗೆ 25 ರು.ನಂತೆ ಮಾರಾಟ ಮಾಡಬೇಕು ಎಂದು ಆಗ್ರಹಿಸಿದರು.ರೈತ ಮುಖಂಡರ ಪ್ರತಿಭಟನೆ ವೇಳೆ ಹಾಜರಿದ್ದ ಕಾರ್ಖಾನೆ ಉಪಾಧ್ಯಕ್ಷ ರಾಮಚಂದ್ರರಾವ್, ಅಧಿಕಾರಿಗಳಾದ ಪರಿಮಳ ರಂಗನ್, ಗೌರಿ ಪ್ರಕಾಶ್ ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಸೋ.ಶಿ.ಪ್ರಕಾಶ್, ಟಿ.ಲಿಂಗರಾಜು, ಎಚ್.ಟಿ.ನಿಂಗೇಗೌಡ, ಉರುಗಲವಾಡಿ ಉಮೇಶ, ಪುಟ್ಟಸ್ವಾಮಿ, ಸಿದ್ದರಾಮ, ಹುಚ್ಚೇಗೌಡ, ಜಿ.ಎನ್.ಮಹೇಶ್, ಅಶೋಕ, ವಿ.ಟಿ.ಗೌಡ ಮತ್ತಿತರರು ಭಾಗವಹಿಸಿದ್ದರು.