ವಕ್ಫ್‌ ಬೋರ್ಡಿನಿಂದ ರೈತರಿಗೆ ಅನ್ಯಾಯ ಖಂಡಿಸಿ ಪ್ರತಿಭಟನೆ

| Published : Nov 23 2024, 12:35 AM IST

ಸಾರಾಂಶ

ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕನಕಗಿರಿ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಕನಕಗಿರಿ: ವಕ್ಫ್ ಬೋರ್ಡಿನಿಂದ ರೈತರಿಗಾಗುತ್ತಿರುವ ಸಮಸ್ಯೆ ಖಂಡಿಸಿ ಹಾಗೂ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ರೈತ ಸಂಘದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಗಣೇಶರೆಡ್ಡಿ ಮಾತನಾಡಿ, ವಕ್ಫ್ ಬೋರ್ಡ್ ಕೇವಲ ಕರ್ನಾಟಕ ಅಲ್ಲ, ಭಾರತದಲ್ಲೂ ರೈತರ ವಿಚಾರವಾಗಿ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಇದು ಕೊನೆಗೊಳ್ಳಬೇಕಾದರೆ ರೈತರು ಹೋರಾಟಕ್ಕಿಳಿಯಬೇಕು. ಉಳುಮೆ ಮಾಡುವ ಭೂಮಿಯೂ ರೈತರ ಬದಲಾಗಿ ವಕ್ಪ್ ಎಂದು ನಮೂದಾಗಿರುವುದು ಕಂಡು ಬಂದಿವೆ. ರಾಜ್ಯದ ವಕ್ಫ್‌ ಸಚಿವರು ರೈತರ ಕ್ಷಮೆಯಾಚಿಸುವುದಲ್ಲದೆ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರಲ್ಲದೆ ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಕನಕಗಿರಿ ಭಾಗದ ಕೆರೆಗಳನ್ನು ತುಂಬಿಸಿಲ್ಲ. ರೈಸ್ ಟೆಕ್ನಾಲಜಿ ಪಾರ್ಕ್ ಹೆಸರಲ್ಲಿ ನೂರಾರು ಎಕರೆ ರೈತರ ಜಮೀನು ಪಡೆದುಕೊಂಡಿದೆ. ಆದರೆ, ರೈಸ್ ಪಾರ್ಕ್ ಜೀವ ಕಳೆದುಕೊಂಡಿದ್ದು, ರೈಸ್ ಪಾರ್ಕ್ ಆರಂಭಿಸಿ ಕ್ಷೇತ್ರದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಲ್ಲ ಎಂದು ಆರೋಪಿಸಿದರು.

ಇಲ್ಲಿನ ಎದುರು ಹನುಮಪ್ಪ ದೇವಸ್ಥಾನದಿಂದ ರಾಜಬೀದಿಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆದು ವಾಲ್ಮೀಕಿ ವೃತ್ತದಲ್ಲಿ ಸಭೆ ನಡೆದು ತಹಸೀಲ್ದಾರ್ ವಿಶ್ವನಾಥ ಮುರುಡಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಸಗರಪ್ಪ ಕಂಪ್ಲಿ, ಉಮಾಕಾಂತ ದೇಸಾಯಿ, ಸೋಮಶೇಖರರೆಡ್ಡಿ ಅಳ್ಳಳ್ಳಿ ಇತರರಿದ್ದರು.