ಗೋಮಾಳಕ್ಕೆ ತಂತಿಬೇಲಿ ಅಳವಡಿಕೆ ವಿರೋಧಿಸಿ ಪ್ರತಿಭಟನೆ

| Published : Jan 07 2024, 01:30 AM IST

ಗೋಮಾಳಕ್ಕೆ ತಂತಿಬೇಲಿ ಅಳವಡಿಕೆ ವಿರೋಧಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿ ಗ್ರಾಮದಲ್ಲಿ ದಲಿತರ ಆಶ್ರಯ ನಿವೇಶನಕ್ಕೆ ಮಂಜೂರಾಗಿದ್ದ ಜಾಗವನ್ನು ಪ್ರಭಾವಿ ವ್ಯಕ್ತಿಯೊಬ್ಬರು ಅತಿಕ್ರಮ ಪ್ರವೇಶ ಮಾಡಿ ಸುತ್ತಲೂ ಬೇಲಿ ಹಾಕಿದ್ದಾರೆಂದು ಆರೋಪಿಸಿ ಬೇಲಿಯನ್ನು ಕಿತ್ತುಹಾಕಿ ಪ್ರತಿಭಟನೆ ನಡೆಸಲಾಯಿತು.

ಕನಕಪುರ: ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿ ಗ್ರಾಮದಲ್ಲಿ ದಲಿತರ ಆಶ್ರಯ ನಿವೇಶನಕ್ಕೆ ಮಂಜೂರಾಗಿದ್ದ ಜಾಗವನ್ನು ಪ್ರಭಾವಿ ವ್ಯಕ್ತಿಯೊಬ್ಬರು ಅತಿಕ್ರಮ ಪ್ರವೇಶ ಮಾಡಿ ಸುತ್ತಲೂ ಬೇಲಿ ಹಾಕಿದ್ದಾರೆಂದು ಆರೋಪಿಸಿ ಬೇಲಿಯನ್ನು ಕಿತ್ತುಹಾಕಿ ಪ್ರತಿಭಟನೆ ನಡೆಸಲಾಯಿತು.

ಹುಣಸನಹಳ್ಳಿ ಗ್ರಾಮದ ಸರ್ವೆ ನಂ.೧೮೦ರ ಗೋಮಾಳ ವಿವಾದಿತ ಸ್ಥಳವಾಗಿದೆ. ಬೆಂಗಳೂರಿನ ಸೈಯದ್ ಪಾಷಾ ಮತ್ತು ಸೈಯದ್ ಇಕ್ಬಾಲ್ ಎನ್ನುವವರು ಸ್ಥಳೀಯ ನಿವಾಸಿಗಳ ಗಮನಕ್ಕೆ ತರದೆ ಈ ಜಾಗವನ್ನು ತಮ್ಮದು ಎಂದೇಳಿಕೊಂಡು ಸುತ್ತಲೂ ತಂತಿ ಬೇಲಿ ಹಾಕಿ ಸಮುದಾಯಕ್ಕೆ ಅನ್ಯಾಯವೆಸಗಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸದುರ್ಗ ಪ್ರಶಾಂತ್, ದಿವ್ಯ, ಶಾಂತಮ್ಮ, ರವಿ ಮತ್ತಿತರರು ಮಾತನಾಡಿ, ದಲಿತರಿಗೆ ಮಂಜೂರಾಗಿದ್ದ ಸರ್ಕಾರಿ ಗೋಮಾಳ ಜಮೀನಿಗೆ ರಾತ್ರೋರಾತ್ರಿ ತಂತಿ ಬೇಲಿ ಹಾಕಿದ್ದಾರೆ. ಈ ಸ್ಥಳ ತಮಗೆ ಸೇರಿಬೇಕಿದ್ದು, ತಂತಿ ಬೇಲಿಯನ್ನು ಕಿತ್ತು ಹಾಕಿ ನಮಗೆ ನಿಗದಿಪಡಿಸಿದ್ದ ಈ ಜಾಗವನ್ನು ಕೂಡಲೇ ಮಂಜೂರು ಮಾಡಿ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.

ವಿಷಯ ತಿಳಿದ ಕೋಡಿಹಳ್ಳಿ ನಾಡಕಚೇರಿ ಉಪ ತಹಸೀಲ್ದಾರ್ ಪ್ರವೀಣ್, ಕಂದಾಯ ನಿರೀಕ್ಷಕ ಬಸವರಾಜು, ಗ್ರಾಮ ಲೆಕ್ಕಾಧಿಕಾರಿ ಪ್ರೀತಿ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.

ಈ ವೇಳೆ ಮಾತನಾಡಿದ ಅಧಿಕಾರಿಗಳು, ಈ ಜಾಗ ಸರ್ಕಾರಿ ಗೋಮಾಳವಾಗಿದೆ. ಈ ಸ್ಥಳಕ್ಕೆ ಹೊರಗಿನವರು ಬಂದು ತಂತಿಬೇಲಿ ಹಾಕಿರುವುದು ಅಕ್ರಮವಾಗಿದೆ. ಅವರ ವಿಳಾಸವನ್ನು ಪತ್ತೆ ಹಚ್ಚಿ ಸರ್ಕಾರಿ ಜಾಗ ಅತಿಕ್ರಮ ಪ್ರವೇಶದಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.

ಅಧಿಕಾರಿಗಳ ಭರವಸೆಯಿಂದ ಪ್ರತಿಭಟನೆಯನ್ನು ವಾಪಸ್ಸು ಪಡೆದು ಕೂಡಲೇ ಈ ಜಾಗವನ್ನು ನಮಗೆ ಮಂಜೂರು ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕುಟ್ಟಿಯಮ್ಮ, ಭುವನೇಶ್ವರಿ, ಪಾಪಮ್ಮ, ಶೇಖರ, ವೆಂಕಟೇಶ್, ಮಾದಪ್ಪ ಹಲವರು ಭಾಗವಹಿಸಿದ್ದರು. ಪೊಟೋ೬ಸಿಪಿಟಿ೧೦:

ಕನಕಪುರ ತಾಲೂಕು ಹುಣಸನಹಳ್ಳಿ ಗ್ರಾಮದಲ್ಲಿ ಅತಿಕ್ರಮವಾಗಿ ಪ್ರವೇಶಿಸಿರುವ ಸರ್ವೆ ನಂ. ೧೮೦ರ ಗೋಮಾಳ ಜಾಗದಲ್ಲಿ ಹಾಕಿದ್ದ ತಂತಿ ಬೇಲಿಯನ್ನು ಕಿತ್ತುಹಾಕಿ ದಲಿತರು ಪ್ರತಿಭಟನೆ ನಡೆಸಿದರು.